ಮೀನು ಸೇವನೆಯ ಅದ್ಭುತ ಆರೋಗ್ಯ ಲಾಭಗಳ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಿ….

Update: 2019-05-27 17:46 GMT

ಮೀನು ಅತ್ಯಂತ ಆರೋಗ್ಯಕರ ಆಹಾರಗಳಲ್ಲೊಂದಾಗಿದೆ. ಪ್ರೋಟಿನ್,ವಿಟಾಮಿನ್ ಡಿ,ಕ್ಯಾಲ್ಸಿಯಂ ಮತ್ತು ರಂಜಕದಂತಹ ಮಹತ್ವದ ಮತ್ತು ಅಗತ್ಯ ಪೋಷಕಾಂಶಗಳನ್ನು ಸಮೃದ್ಧವಾಗಿ ಒಳಗೊಂಡಿರುವ ಮೀನು ಕಬ್ಬಿಣ, ಸತುವು,ಅಯೊಡಿನ್,ಮ್ಯಾಗ್ನೀಷಿಯಂ ಮತ್ತು ಪೊಟ್ಯಾಷಿಯಮ್‌ಗಳಂತಹ ಖನಿಜಗಳ ಆಗರವಾಗಿದೆ. ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳಂತಹ ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲಗಳಲ್ಲೊಂದಾಗಿದೆ. ಮೀನು ನಮ್ಮ ಶರೀರಕ್ಕೆ ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ....

ಅಲ್ಜೀಮರ್ಸ್ ಕಾಯಿಲೆಯನ್ನು ತಡೆಯುತ್ತದೆ

ನಿಯಮಿತವಾಗಿ ಮೀನು ತಿನ್ನುವುದು ಮಿದುಳಿನ ಜೀವಕೋಶಗಳ ತ್ವರಿತ ನಾಶವನ್ನು ತಡೆಯುವ ಮತ್ತು ವೃದ್ಧಾಪ್ಯದಲ್ಲಿ ಮಿದುಳಿನ ಕಾರ್ಯ ನಿರ್ವಹಣೆಯು ಕುಂದುವುದನು ್ನತಡೆಯುವ ಮಾನವನ ಮಿದುಳಿನಲ್ಲಿಯ ಬೂದುದ್ರವ್ಯವನ್ನು ಹೆಚ್ಚಿಸುತ್ತದೆ. ತನ್ಮೂಲಕ ಅಲ್ಜೀಮರ್ಸ್ ಕಾಯಿಲೆಗೆ ಗುರಿಯಾಗುವುದನ್ನು ತಡೆಯುತ್ತದೆ.

ಹೃದ್ರೋಗಗಳ ಅಪಾಯವನ್ನು ತಗ್ಗಿಸುತ್ತದೆ

ನಿಯಮಿತವಾಗಿ ಮೀನು ತಿನ್ನುವುದರಿಂದ ಹೃದ್ರೋಗಗಳಿಗೆ ಗುರಿಯಾಗುವ ಅಪಾಯಗಳು ಕಡಿಮೆಯಾಗುತ್ತವೆ. ಮೀನಿನಲ್ಲಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು ಟ್ರೈಗ್ಲಿಸರೈಡ್‌ಗಳು,ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದೊತ್ತಡವನ್ನು ಕಡಿಮೆಗೊಳಿಸುವ ಮೂಲಕ ಹೃದಯವನ್ನು ಆರೋಗ್ಯಯುತವಾಗಿರಿಸುತ್ತವೆ.

ಖಿನ್ನತೆಯನ್ನು ನಿವಾರಿಸುತ್ತದೆ

ಮೀನಿನ ನಿಯಮಿತ ಸೇವನೆಯು ಮಿದುಳಿನಲ್ಲಿಯ ಸ್ಟೆರೊಟೋನಿನ್ ಹಾರ್ಮೋನ್ ಮಟ್ಟಗಳು ಹೆಚ್ಚಲು ನೆರವಾಗುತ್ತವೆ ಮತ್ತು ಈ ಹಾರ್ಮೋನ್ ಖಿನ್ನತೆಗೆ ಸಂಬಂಧಿಸಿದ ಲಕ್ಷಣಗಳನ್ನು ತಗ್ಗಿಸುತ್ತದೆ. ಅಲ್ಲದೆ ಮೀನಿನಲ್ಲಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳೂ ಖಿನ್ನತೆಯನ್ನು ಶಮನಿಸಲು ನೆರವಾಗುತ್ತವೆ.

ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಮೀನಿನಲ್ಲಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು ಕಣ್ಣುಗಳ ಸ್ನಾಯುಗಳು ಮತ್ತು ನರಗಳನ್ನು ಪೋಷಿಸುವ ಮೂಲಕ ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುತ್ತವೆ. ಮೀನಿನ ನಿಯಮಿತ ಸೇವನೆಯು ದೃಷ್ಟಿಯನ್ನು ಉತ್ತಮಗೊಳಿಸುತ್ತದೆ ಮತ್ತು ದೃಷ್ಟಿ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ.

ಸಂಧಿವಾತಕ್ಕೆ ಚಿಕಿತ್ಸೆ ನೀಡುತ್ತದೆ

ಮೀನಿನಲ್ಲಿ ಸಮೃದ್ಧವಾಗಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು ಶರೀರಕ್ಕೆ ವಿವಿಧ ಲಾಭಗಳನ್ನು ನೀಡುತ್ತವೆ. ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಅವು ಮಹತ್ವದ ಪಾತ್ರವನ್ನು ವಹಿಸುತ್ತವೆ. ಮೀನಿನಲ್ಲಿರುವ ವಿಟಾಮಿನ್ ಇ ಕೂಡ ಈ ನಿಟ್ಟಿನಲ್ಲಿ ನೆರವಾಗುತ್ತದೆ.

ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ

ಮೀನಿನಲ್ಲಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು ಕ್ಯಾನ್ಸರ್ ಕೋಶಗಳ ಯದ್ವಾತದ್ವಾ ವಿಭಜನೆಯನ್ನು ತಡೆಯಬಲ್ಲವಾದ್ದರಿಂದ ಪ್ರತಿನಿತ್ಯ ಮೀನು ಸೇವನೆಯು ಕರುಳಿನ ಕ್ಯಾನ್ಸರ್,ಬಾಯಿ ಕ್ಯಾನ್ಸರ್,ಗಂಟಲು ಕ್ಯಾನ್ಸರ್,ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ನಂತಹ ಹಲವಾರು ಕ್ಯಾನ್ಸರ್ ರೋಗಗಳಿಗ ಗುರಿಯಾಗುವ ಅಪಾಯವನ್ನು ಕಡಿಮೆಗೊಳಿಸುತ್ತದೆ.

ಒಳ್ಳೆಯ ನಿದ್ರೆಯನ್ನು ನೀಡುತ್ತದೆ

 ನಿಯಮಿತ ಮೀನು ಸೇವನೆಯು ನಿದ್ರೆಯ ಚಕ್ರವನ್ನು ಉತ್ತಮಗೊಳೀಸಲು ನೆರವಾಗುತ್ತದೆ. ಮೀನಿನ ಸೇವನೆ ಹೆಚ್ಚಿದಂತೆ ನಿದ್ರೆಯ ಗುಣಮಟ್ಟವೂ ಉತ್ತಮಗೊಳ್ಳುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಮೀನಿನಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಡಿ ಉತ್ತಮ ನಿದ್ರೆಗೆ ನೆರವಾಗುತ್ತದೆ.

ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ

ಮೀನಿನಲ್ಲಿರುವ ಒಮಗಾ-3 ಫ್ಯಾಟಿ ಆ್ಯಸಿಡ್‌ಗಳು ನಮ್ಮ ಶರೀರದಲ್ಲಿ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸಲು ಮತ್ತು ಕೊಲೆಸ್ಟ್ರಾಲ್ ಸೃಷ್ಟಿಯಾಗುವುದನ್ನು ತಡೆಯಲು ನೆರವಾಗುತ್ತವೆ.

ಸ್ವರಕ್ಷಿತ ರೋಗಗಳನ್ನು ತಡೆಯುತ್ತದೆ

ಕೊಬ್ಬು ಹೆಚ್ಚಿರುವ ಮೀನುಗಳನ್ನು ನಿತ್ಯ ಸೇವಿಸುವುದರಿಂದ ಟೈಪ್ 1 ಮಧುಮೇಹದಂತಹ ಸ್ವರಕ್ಷಿತ ರೋಗಳನ್ನು ತಡೆಯಲು ಸಾಧ್ಯ ಎನ್ನುವುದನ್ನು ವಿವಿಧ ಅಧ್ಯಯನಗಳು ಬೆಟ್ಟು ಮಾಡಿವೆ. ಮೀನಿನಲ್ಲಿ ಹೇರಳವಾಗಿರುವ ವಿಟಾಮಿನ್ ಡಿ ಶರೀರದ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಗ್ಲುಕೋಸ್ ಚಯಾಪಚಯಕ್ಕೆ ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News