ಇರಾನ್ ವಿಷಯದಲ್ಲಿ ಅಮೆರಿಕದ ಬಾಲಂಗೋಚಿಯಂತಾಗಿರುವ ಭಾರತ

Update: 2019-05-28 10:46 GMT

ಒಂದು ರಾಷ್ಟ್ರದ ಸಾರ್ವಭೌಮತೆಯನ್ನು ಗೌರವಿಸುವುದು ಮತ್ತು ಅಂತರ್‌ರಾಷ್ಟ್ರೀಯ ಕಾನೂನುಗಳನ್ನು ಪಾಲನೆ ಮಾಡುವ ತತ್ವಗಳು ಭಾರತದ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳಾಗಿವೆ. ಆದರೆ ಈ ಬಾರಿ ಭಾರತವು ಅಮೆರಿಕವನ್ನು ಮೆಚ್ಚಿಸುವ ಸಲುವಾಗಿ ಈ ಪಾರಂಪರಿಕ ನಿಲುವಿನಿಂದ ದಾರಿ ತಪ್ಪಿದೆ.


ಇರಾನ್ ಮೇಲೆ ಅಮೆರಿಕವು ವಿಧಿಸಿರುವ ನಿರ್ಬಂಧದ ಬಗ್ಗೆ ಭಾರತದ ನಿಲುವು ಈವರೆಗಿನ ಕೆಲವು ಊಹಾಪೋಹಗಳನ್ನು ನಿಜಗೊಳಿಸಿದೆ. ಇರಾನ್ ಜೊತೆಗಿನ ಮೈತ್ರಿಯಲ್ಲೇ ಭಾರತದ ಹಿತಾಸಕ್ತಿ ಹೆಚ್ಚಿಗಿದ್ದರೂ ಅಮೆರಿಕದ ಈ ಏಕಪಕ್ಷೀಯ ನಿರ್ಬಂಧವನ್ನು ಪ್ರತಿಭಟಿಸದೆ ಅದು ಜಗತ್ತಿನ ರಾಜಕಾರಣದಲ್ಲಿ ಅಮೆರಿಕದ ಕಿರಿಯ ಪಾಲುದಾರನ ಪಾತ್ರವಹಿಸಲು ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಿದೆ. ಇದರ ಬಗ್ಗೆ ಭಾರತದ ಅಧಿಕೃತ ನಿಲುವು ಈವರೆಗೆ ಅಸ್ಪಷ್ಟವಾಗಿದ್ದು ಎರಡು ವಿಭಿನ್ನ ಬಗೆಯ ವ್ಯಾಖ್ಯಾನಗಳು ಹರಿದಾಡುತ್ತಿವೆ. ಅಮೆರಿಕವು ಇರಾನಿನ ಮೇಲೆ ಹಾಕಿದ ನಿರ್ಬಂಧಗಳ ಬಗ್ಗೆ ಭಾರತವನ್ನೂ ಒಳಗೊಂಡಂತೆ ಇತರ ಕೆಲವು ದೇಶಗಳಿಗೆ ಕೊಟ್ಟ ರಿಯಾಯಿತಿಗಳನ್ನು ವಾಪಸ್ ಪಡೆದುಕೊಂಡ ನಿರ್ಧಾರವನ್ನು ಅಮೆರಿಕವು ಘೋಷಿಸಿದ ನಂತರ ನರೇಂದ್ರ ಮೋದಿ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಮಂತ್ರಿಯು ಒಂದು ಟ್ವೀಟ್ ಮೂಲಕ ಪ್ರತಿಕ್ರಿಯೆಯನ್ನು ಕೊಟ್ಟರು. ಆ ಟ್ವೀಟಿನಲ್ಲಿ ಅವರು ಅಮೆರಿಕದ ತೀರ್ಮಾನದ ಬಗ್ಗೆ ಏನನ್ನೂ ಹೇಳಿರಲಿಲ್ಲ. ಬದಲಿಗೆ ಇದರಿಂದ ಉದ್ಭವವಾಗಬಹುದಾದ ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರತವು ಸಂಪೂರ್ಣ ಸನ್ನದ್ಧವಾಗಿದೆಯೆಂಬ ಬಗ್ಗೆ ಮಾತ್ರ ಹೇಳಿದ್ದರು. ಎರಡನೇ ಬಗೆಯ ನಿಲುವನ್ನು ಭಾರತದ ವಿದೇಶಾಂಗ ಮಂತ್ರಿಗಳು ವ್ಯಕ್ತಪಡಿಸಿದ್ದರು.

ಇರಾನಿನ ವಿದೇಶಾಂಗ ಮಂತ್ರಿಯ ಜೊತೆ ಮೇ 14ರಂದು ನಡೆದ ಭೇಟಿಯಲ್ಲಿ ಅವರು ಭಾರತದಲ್ಲಿ ಈಗ ಚುನಾವಣೆಗಳು ನಡೆಯುತ್ತಿರುವುದರಿಂದ ಇದರ ಬಗ್ಗೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದೂ, ಚುನಾವಣೆಯ ನಂತರ ಅಧಿಕಾರಕ್ಕೆ ಬರುವ ಹೊಸ ಸರಕಾರ ಈ ಬಗ್ಗೆ ಖಚಿತವಾದ ನಿರ್ಣಯವನ್ನು ತೆಗೆದುಕೊಳ್ಳುತ್ತದೆಂದೂ ಹೇಳಿದ್ದರು. ಆದರೆ ಅವರು ಅಮೆರಿಕ ವಿಧಿಸಿದ ನಿರ್ಬಂಧದ ಬಗ್ಗೆ ಮಾತ್ರ ಒಂದು ಮಾತನ್ನೂ ಆಡಲು ಸಹ ನಿರಾಕರಿಸಿದ್ದರು.

ಆದರೆ ಭಾರತದ ತೈಲ ಕಂಪೆನಿಗಳು ಮಾತ್ರ ಈಗಾಗಲೇ ಇರಾನಿನಿಂದ ತೈಲ ಖರೀದಿಯನ್ನು ನಿಲ್ಲಿಸಿದ್ದು ಬೇರೆ ಸರಬರಾಜುದಾರರನ್ನು ಹುಡುಕುತ್ತಿವೆ. ಹೀಗಾಗಿ ಇರಾನ್ ವಿಷಯದಲ್ಲಿ ಭಾರತವು ಯಾವ ನಿಲುವು ತೆಗೆದುಕೊಳ್ಳಬಹುದೆಂಬುದನ್ನು ಅರ್ಥಮಾಡಿಕೊಳ್ಳಲು 2019ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಬರುವ ತನಕ ಕಾಯುವ ಅಗತ್ಯವಿರಲಿಲ್ಲ. ಈಗ ಸದ್ಯಕ್ಕಂತೂ ಭಾರತವು ಅಮೆರಿಕವು ಹಾಕಿರುವ ನಿರ್ಬಂಧವನ್ನು ಚಾಚೂ ತಪ್ಪದಂತೆ ಪಾಲಿಸುತ್ತಿದೆ. ಅಮೆರಿಕದ ಟ್ರಂಪ್ ಸರಕಾರವು ಇರಾನ್ ಮೇಲೆ ಹಾಕಿರುವ ನಿರ್ಬಂಧವು ಅಸ್ತಿತ್ವದಲ್ಲಿರುವ ಎಲ್ಲಾ ಅಂತರ್‌ರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸುತ್ತದೆ. ಅದು ಏಕಪಕ್ಷೀಯವಾಗಿದ್ದು ಅದಕ್ಕೆ ಯಾವುದೇ ಕಾನೂನಾತ್ಮಕ ಋಜುತ್ವವಿಲ್ಲ. ಅವು ಅಮೆರಿಕ, ಸೌದಿ ಅರೇಬಿಯಾ ಮತ್ತು ಇಸ್ರೇಲ್ ದೇಶಗಳ ಮಿಲಿಟರಿ ಮತ್ತು ರಾಜತಾಂತ್ರಿಕ ಲೆಕ್ಕಾಚಾರಗಳ ಫಲಿತವಾಗಿದ್ದು ಅದರಿಂದ ಭಾರತಕ್ಕೆ ಏನೂ ಲಾಭವಿಲ್ಲ. ಭಾರತವು ಇರಾನಿನಿಂದ ಪ್ರತಿತಿಂಗಳು 1.2 ಮಿಲಿಯನ್ ಟನ್ನಿನಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದು ಭಾರತದ ಒಟ್ಟಾರೆ ತೈಲ ಆಮದಿನ ಶೇ.10ರಷ್ಟಾಗುತ್ತಿತ್ತು. ಸೌದಿ ಅರೇಬಿಯಾ ಮತ್ತು ಇರಾಕಿನ ನಂತರ ಇರಾನ್ ಭಾರತದ ಮೂರನೇ ಅತಿ ದೊಡ್ಡ ತೈಲ ಸರಬರಾಜುದಾರನಾಗಿತ್ತು.

ಇರಾನಿನಿಂದ ತೈಲ ಸರಬರಾಜು ಮಾಡಿಕೊಳ್ಳುವುದರಲ್ಲಿ ಭಾರತಕ್ಕೆ ಹಲವಾರು ಅನುಕೂಲತೆಗಳಿದ್ದವು. ಇರಾನಿನ ತೈಲದ ದರವು ಅಗ್ಗವಾಗಿತ್ತು. ಮಾತ್ರವಲ್ಲದೆ ಹಣ ಪಾವತಿಗೆ ಮುನ್ನ ದೀರ್ಘ ಅವಧಿಯ ಸಾಲ ಸೌಲಭ್ಯವೂ ದೊರಕುತ್ತಿತ್ತು. ಭಾರತವು ತನ್ನ ಬಹುಪಾಲು ಖರೀದಿಯನ್ನು ಯೂರೋಗಳಲ್ಲಿ ಮತ್ತು ಉಳಿದದ್ದನ್ನು ರೂಪಾಯಿಗಳಲ್ಲಿ ಪಾವತಿ ಮಾಡುತ್ತಿತ್ತು. ಇದು ಅಮೆರಿಕದ ಡಾಲರ್ ಮೇಲಿನ ನಮ್ಮ ಅವಲಂಬನೆಯನ್ನು ತಗ್ಗಿಸುತ್ತಿತ್ತು. ರೂಪಾಯಿಗಳಲ್ಲಿ ಮಾಡಬೇಕಿದ್ದ ಪಾವತಿಯ ಒಂದು ಭಾಗವನ್ನು ಇತರ ಸರಕುಗಳ ರೂಪದಲ್ಲಿಯೂ ಪಾವತಿ ಮಾಡಬಹುದಾಗಿತ್ತು. ತಾನು ತೆರಬೇಕಿದ್ದ ಬೆಲೆಯ ಮೌಲ್ಯದ ಒಂದು ಭಾಗವನ್ನು ಅಕ್ಕಿ, ಔಷಧ ಮತ್ತಿತರ ಸರಕುಗಳನ್ನು ರಫ್ತು ಮಾಡುವುದರ ಮೂಲಕವೂ ಸರಿದೂಗಿಸಬಹುದಿತ್ತು. ಭಾರತವು ತನ್ನ ಒಟ್ಟಾರೆ ತೈಲ ಅಗತ್ಯದ ಶೇ.84ರಷ್ಟನ್ನು ಆಮದು ಮಾಡಿ ಕೊಳ್ಳುತ್ತದೆ. ಹೀಗಾಗಿ ಭಾರತದ ತೈಲದ ದೇಶೀಯ ಬೆಲೆಗಳು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿವೆ. ವಾಣಿಜ್ಯ ಕೊರತೆ ಹೆಚ್ಚಾಗುತ್ತಿರುವುದರಿಂದ ಮತ್ತು ತೈಲ ಮತ್ತು ಅನಿಲ ವೆಚ್ಚಗಳು (2018-19ರಲ್ಲಿ ಇದರ ಬಾಬತ್ತು 100 ಬಿಲಿಯನ್ ಡಾಲರ್‌ಗಳಷ್ಟಾಗಿತ್ತು) ಅಪಾರವಾಗಿ ಹೆಚ್ಚಾಗುತ್ತಿರುವುದರಿಂದ ಸಾಧ್ಯವಾದಷ್ಟು ಕಡಿಮೆ ಬೆಲೆಯ ಮತ್ತು ಹೆಚ್ಚು ಅವಲಂಬಿಸಬಹುದಾದ ಸರಬರಾಜುದಾರರ ಅಗತ್ಯವನ್ನು ಅದು ಅನಿವಾರ್ಯ ಮಾಡುತ್ತದೆ. ಆದರೆ ಈಗ ಭಾರತದ ತೈಲ ಸಂಸ್ಕರಣಾ ಕಂಪೆನಿಗಳು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗಳ ಜೊತೆ ಹೆಚ್ಚುವರಿ ಸರಬರಾಜಿಗಾಗಿ ಹೊಸ ಮಾತುಕತೆಯಾಡಬೇಕಾಗಿದೆ.

ಕೆಲವು ತೈಲ ಸಂಸ್ಕರಣಾ ಘಟಕಗಳ ಮೇಲೆ ವೆನೆಝುವೆಲಾದಿಂದ ಸರಬರಾಜನ್ನು ಪಡೆದುಕೊಳ್ಳದಂತೆ ಒತ್ತಡವನ್ನು ಹೇರಲಾಗುತ್ತಿದೆ. ಇರಾನ್ ಮತ್ತು ವೆನೆಝುವೆಲಾಗಳ ಕಚ್ಚಾ ತೈಲಗಳು ಭಾರತದ ಸಂಸ್ಕರಣಾ ಕಂಪೆನಿಗಳಿಗೆ ಹೆಚ್ಚಿನ ಲಾಭವನ್ನು ಒದಗಿಸುತ್ತಿದ್ದವು. ಈ ದೇಶಗಳಿಂದ ತೈಲ ಸರಬರಾಜನ್ನು ನಿಲ್ಲಿಸಿದಲ್ಲಿ ತೈಲ ಬೆಲೆಯು ಹೆಚ್ಚಲಿದ್ದು ಅದನ್ನು ಅನಿವಾರ್ಯವಾಗಿ ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತದೆ. ಚುನಾವಣೆಯ ನಂತರದಲ್ಲಿ ಭಾರತದ ಗ್ರಾಹಕರು ತೈಲ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಅನುಭವಿಸಲಿದ್ದಾರೆ. ಅಮೆರಿಕದ ನಿರ್ಬಂಧಗಳನ್ನು ಒಪ್ಪಿಕೊಳ್ಳುವುದರ ಮೂಲಕ ಭಾರತವು ಇರಾನಿನ ಫರ್ಜಾಡ್ ಬಿ ಅನಿಲ ವಲಯದ ಉತ್ಪನ್ನದಲ್ಲಿ ಪಡೆದುಕೊಳ್ಳಬಹುದಿದ್ದ ಪಾಲನ್ನೂ ಕಳೆದುಕೊಳ್ಳುತ್ತದೆ. ಈಗಾಗಲೇ ಭಾರತವು ಅಮೆರಿಕವನ್ನು ಮೆಚ್ಚಿಸುವ ಸಲುವಾಗಿ ಇರಾನಿನಿಂದ ಭೂಮಾರ್ಗದ ಮೂಲಕ ಅನಿಲ ಸರಬರಾಜು ಪೈಪ್‌ಲೈನಿನ ನಿರ್ಮಾಣ ಮಾಡಿಕೊಳ್ಳುವ ಅವಕಾಶವನ್ನು ಕಳೆದು ಕೊಂಡಿದೆ. ಇದರಿಂದಾಗಿ ಭಾರತವು ತನ್ನ ಬಹುಪಾಲು ಅಗತ್ಯಗಳನ್ನು ಸಮುದ್ರ ಮಾರ್ಗದ ಮೂಲಕವಾಗಿ ಮಾತ್ರ ಸರಬರಾಜು ಮಾಡಿಕೊಳ್ಳಬೇಕಾಗುವುದರಿಂದ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಯಾವುದೇ ಏರುಪೇರುಗಳಾದರೂ ಭಾರತದ ಪರಿಸ್ಥಿತಿ ಇನ್ನೂ ಹೆಚ್ಚು ಅತಂತ್ರಗೊಳ್ಳುತ್ತದೆ.

ಅಮೆರಿಕವು ಇರಾನಿನ ಮೇಲೆ ಹಾಕಿರುವ ನಿರ್ಬಂಧವು ಭಾರತವು ಇರಾನಿನೊಡನೆ ಹೊಂದಿರುವ ಯಾವ್ಯಾವ ಸಹಕಾರ ಯೋಜನೆಗಳ ಮೇಲೆ ಪ್ರಭಾವ ಬೀರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ ಅದರಿಂದ ಒಟ್ಟಾರೆಯಾಗಿ ವ್ಯತಿರಿಕ್ತ ಪರಿಣಾಮವಾಗುವುದರಲ್ಲಿ ಮಾತ್ರ ಯಾವುದೇ ಸಂದೇಹವಿಲ್ಲ. ಅಫ್ಘಾನಿಸ್ತಾನ, ಮಧ್ಯ ಏಶ್ಯಾ ಹಾಗೂ ಯೂರೋಪುಗಳೊಡನೆ ಭೂಮಾರ್ಗವನ್ನು ಕಲ್ಪಿಸುವ ಭಾರತದ ಮಹತ್ವಾಕಾಂಕ್ಷಿ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಯ ಗತಿಯೇನಾಗುವುದು ಎಂಬುದೂ ಸಹ ಸ್ಪಷ್ಟವಿಲ್ಲ. ಭಾರತವು ಅರೇಬಿಯಾ ಸಮುದ್ರದಲ್ಲಿರುವ ಇರಾನಿನ ಚಬಹಾರ್ ಬಂದರಿನ ಮೇಲೆ ಈಗಾಗಲೇ ಸಾಕಷ್ಟು ಹೂಡಿಕೆ ಮಾಡಿಬಿಟ್ಟಿದೆ. ಅಷ್ಟು ಮಾತ್ರವಲ್ಲದೆ ಪಶ್ಚಿಮ ಏಶ್ಯಾದಲ್ಲಿ ಭಾರತದ ರಫ್ತುಗಳಿಗೆ ಪರ್ಯಾಯ ಮಾರುಕಟ್ಟೆಯನ್ನು ಗಳಿಸಿಕೊಳ್ಳಬೇಕೆಂಬ ಭಾರತದ ಪ್ರಯತ್ನಗಳಿಗೂ ಇರಾನ್ ಸಹಕಾರ ಅತ್ಯಂತ ಮುಖ್ಯವಾಗಿದೆ. ಭಾರತವು ಅಮೆರಿಕ ವಿಧಿಸಿರುವ ನಿರ್ಬಂಧವನ್ನು ಪಾಲಿಸಬೇಕೆಂದು ವಾದಿಸುವವರು ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಾದರೆ ಭಾರತವು ಅಮೆರಿಕದೊಂದಿಗೆ ಸೇರಿಕೊಳ್ಳುವುದರಲ್ಲೇ ಹೆಚ್ಚಿನ ಲಾಭವಿದೆಯೆಂದು ವಾದಿಸುತ್ತಾರೆ. ಈ ವಾದದ ಪ್ರಕಾರ ಈ ಭೂಭಾಗದಲ್ಲಿ ಚೀನಾವನ್ನು ಸರಿದೂಗಿಸಲು ಅಮೆರಿಕಕ್ಕೆ ಭಾರತದ ಅಗತ್ಯವಿದೆ. ಆದರೆ ಈ ವ್ಯೆಹಾತ್ಮಕ ಆಲೋಚನೆಗಳು ಅದಕ್ಕೆ ತೆರಬೇಕಾದ ಬೆಲೆಯನ್ನು ಮಾತ್ರ ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ.

ಒಂದು ರಾಷ್ಟ್ರದ ಸಾರ್ವಭೌಮತೆಯನ್ನು ಗೌರವಿಸುವುದು ಮತ್ತು ಅಂತರ್‌ರಾಷ್ಟ್ರೀಯ ಕಾನೂನುಗಳನ್ನು ಪಾಲನೆ ಮಾಡುವ ತತ್ವಗಳು ಭಾರತದ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳಾಗಿವೆ. ಆದರೆ ಈ ಬಾರಿ ಭಾರತವು ಅಮೆರಿಕವನ್ನು ಮೆಚ್ಚಿಸುವ ಸಲುವಾಗಿ ಈ ಪಾರಂಪರಿಕ ನಿಲುವಿನಿಂದ ದಾರಿ ತಪ್ಪಿದೆ. ಮತ್ತೊಂದು ಕಡೆ ಭಾರತವು ಅಮೆರಿಕದ ನಿರ್ಬಂಧಗಳನ್ನು ಪಾಲಿಸುವುದಕ್ಕೆ ಬದಲಿಗೆ ತನ್ನ ವಿದೇಶಾಂಗ ಅಗತ್ಯಗಳನ್ನು ಪೂರೈಸುವ ಯಾವ ಕನಿಷ್ಠ ಖಾತರಿಯನ್ನೂ ಸಹ ಪಡೆದುಕೊಂಡಿಲ್ಲ. ಬದಲಿಗೆ ಭಾರತವು ತನ್ನ ವ್ಯೆಹಾತ್ಮಕ ಸ್ವಾಯತ್ತತೆಯ ಜೊತೆ ರಾಜಿ ಮಾಡಿಕೊಳ್ಳುತ್ತಿದೆ. ವಿಶ್ವದ ಏಕೈಕ ಸೂಪರ್ ಪವರ್ ಅನ್ನು ಮೆಚ್ಚಿಸುವ ಈ ನೀತಿಗಳಿಂದಾಗಿ ಪ್ರಾದೇಶಿಕ ಮತ್ತು ಜಾಗತಿಕ ರಾಜಕಾರಣದಲ್ಲಿ ಭಾರತದ ಎಲ್ಲಾ ನಡೆಗಳು ಇನ್ನು ಮುಂದೆ ಎಂದೆಂದಿಗೂ ಸಾಮ್ರಾಜ್ಯಶಾಹಿ ಲೆಕ್ಕಾಚಾರಗಳಿಗೆ ತಕ್ಕಂತೆ ಇರಬೇಕಾಗುತ್ತದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News