ಗುರುಗ್ರಾಮ ಘಟನೆ ಖಂಡಿಸಿದ್ದಕ್ಕೆ ಟ್ರೋಲ್‌ಗೊಳಗಾದ ಗಂಭೀರ್ ಟೀಕಾಕಾರರಿಗೆ ಉತ್ತರ ನೀಡಿದ್ದು ಹೀಗೆ...

Update: 2019-05-28 08:14 GMT

ಹೊಸದಿಲ್ಲಿ, ಮೇ 28: ಗುರುಗ್ರಾಮದಲ್ಲಿ ನಮಾಝ್ ಮುಗಿಸಿ ಮನೆಗೆ ಮರಳುತ್ತಿದ್ದ ಮುಸ್ಲಿಂ ಯುವಕನೊಬ್ಬನ ಸ್ಕಲ್ ಕ್ಯಾಪ್ ತೆಗೆದು ಆತನಿಗೆ ಗುಂಪೊಂದು ಜೈ ಶ್ರೀ ರಾಮ್ ಹೇಳುವಂತೆ ಬಲವಂತ ಪಡಿಸಿದ ಘಟನೆ ‘ಖಂಡನಾರ್ಹ’ ಎಂದು ಹೇಳಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದ ಮಾಜಿ ಕ್ರಿಕೆಟಿಗ ಹಾಗೂ ನೂತನ ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವಿಟ್ಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದರೂ ಧೃತಿಗೆಟ್ಟಿಲ್ಲ. ‘‘ಟ್ರೋಲ್ ಗಳು ಹಾಗೂ ಟೀಕಾಕಾರರು ಸಮಸ್ಯೆಯೇ ಅಲ್ಲ, ನಾನು ಕಪ್ಪು ಬಿಳುಪಿನಲ್ಲೇ ಜೀವಿಸುತ್ತೇನೆ, ಸುಳ್ಳಿನ ಹಿಂದೆ ಅಡಗಿಕೊಳ್ಳುವ ಬದಲು ಸತ್ಯ ಹೇಳುವುದು ಸುಲಭ’’ ಎಂದಿದ್ದಾರೆ.

ಗುರುಗ್ರಾಮ್ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದ ಗಂಭೀರ್ ‘‘ನಾವೊಂದು ಜಾತ್ಯತೀತ ರಾಷ್ಟ್ರ’’ ಎಂದು ಒತ್ತಿ ಹೇಳುತ್ತಾ ‘‘ಜಾವೇದ್ ಅಖ್ತರ್ ಅವರು ಓ ಪಾಲನ್ ಹಾರೆ, ನಿರ್ಗುಣ್ ಔರ್ ನ್ಯಾರೆ ಎಂದು ಬರೆದರೆ ರಾಕೇಶ್ ಓಂ ಮೆಹ್ರಾ ಅವರು ಅರ್ಜಿಯಾ ಪದವನ್ನು ದಿಲ್ಲಿ 6ಗಾಗಿ ಬರೆದಿದ್ದಾರೆ’’ ಎಂದಿದ್ದರು.

ಇದಕ್ಕೆ ಸುಮಾರು 4,500ಕ್ಕೂ ಅಧಿಕ ಕಮೆಂಟ್ ಗಳು ಬಂದಿದ್ದು, ಅಲ್ಪಸಂಖ್ಯಾತ ಸಮುದಾಯದ ಸದಸ್ಯನ ಮೇಲೆ ನಡೆದ ದಾಳಿಗೆ ಮಾತ್ರ ಪ್ರತಿಕ್ರಿಯಿಸಿದ್ದೇಕೆ ಎಂದು ಹಲವು ಟ್ವಿಟ್ಟರಿಗರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಂಭೀರ್, ‘‘ಆದರಣೀಯ ಪ್ರಧಾನಿ ಮೋದಿಯ ಮಂತ್ರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಆಧಾರದಲ್ಲಿ ನನ್ನ ಜಾತ್ಯತೀತ ನಿಲುವುಗಳಿವೆ. ನನ್ನ ಪ್ರತಿಕ್ರಿಯೆ ಕೇವಲ ಗುರುಗ್ರಾಮ ಘಟನೆಗೆ ಮಾತ್ರ ಸೀಮಿತವಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ಯಾವುದೇ ದೌರ್ಜನ್ಯ ಖಂಡನೀಯ, ಸಹಿಷ್ಣುತೆ ಮತ್ತು ಸರ್ವರನ್ನೊಳಗೊಂಡ ಅಭಿವೃದ್ಧಿ ಭಾರತದ ಮೌಲ್ಯಗಳಾಗಿವೆ’’ ಎಂದೂ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News