ಪರಿಶಿಷ್ಟ ಬುಡಕಟ್ಟು ವಿದ್ಯಾರ್ಥಿನಿಯ ಆತ್ಮಹತ್ಯೆ ಸಂವಿಧಾನದ ಕೊಲೆ: ಅಖಿಲೇಶ್

Update: 2019-05-28 16:14 GMT

ಲಕ್ನೊ, ಮೇ 28: ಮುಂಬೈಯ ವೈದ್ಯಕೀಯ ವಿದ್ಯಾರ್ಥಿನಿ ಪಾಯಲ್ ಸಲ್ಮಾನ್ ಟಡ್ವಿಯ ಸಾವು ಪರಿಶಿಷ್ಟ ಪಂಗಡದವರಿಗೆ ನೀಡಲಾಗಿರುವ ಸಾಂವಿಧಾನಿಕ ರಕ್ಷಣೆಯ ಕೊಲೆಯಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

ಪಾಯಲ್ ಟಡ್ವಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿನಿಯಾಗಿದ್ದು, ಈಕೆ ಜಾತಿನಿಂದನೆಯ ಬಲಿಪಶುವಾಗಿದ್ದಾಳೆ. ಪ್ರತಿಭಾನ್ವಿತೆ ಡಾ. ಪಾಯಲ್ ಟಡ್ವಿ ಆತ್ಮಹತ್ಯೆಗೆ ಜಾತಿನಿಂದನೆ ಹಾಗೂ ಮೀಸಲಾತಿ ವ್ಯವಸ್ಥೆಯ ಬಗ್ಗೆ ಕೆಲವರು ಮಾಡಿದ ಟೀಕೆ ಕಾರಣವಾಗಿವೆ. ಇದು ಕೊಲೆ ಪ್ರಕರಣವಾಗಿದೆ. ಸಂವಿಧಾನವು ನೀಡಿದ ರಕ್ಷಣೆಯ ಕೊಲೆ ಇದಾಗಿದೆ. ದೇಶವು ಮುಂದೆ ಸಾಗುತ್ತಿರುವ ದಿಕ್ಕನ್ನು ಇದು ಸೂಚಿಸುತ್ತಿದೆಯೇ ಎಂದು ಅಖಿಲೇಶ್ ಟ್ವೀಟ್ ಮಾಡಿದ್ದಾರೆ.

ಮುಂಬೈಯ ನಾಯರ್ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ 23 ವರ್ಷದ ಪಾಯಲ್ ಟಡ್ವಿ ಮೂವರು ಹಿರಿಯ ವೈದ್ಯರ ಕಿರುಕುಳದಿಂದ ನೊಂದು ಮೇ 22ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಆಸ್ಪತ್ರೆಯ ಮೂವರು ಹಿರಿಯ ವೈದ್ಯರಾದ ಹೇಮಾ ಅಹುಜಾ, ಭಕ್ತಿ ಮೆಹರ್ ಮತ್ತು ಅಂಕಿತಾ ಖಾಂಡಿಲ್‌ವಾಲ್ ತನಗೆ ಜಾತಿ ನಿಂದನೆ ಮಾಡಿ ಕಿರುಕುಳ ನೀಡುತ್ತಿರುವುದಾಗಿ ಹಲವು ಬಾರಿ ಪುತ್ರಿ ಫೋನ್ ಮಾಡಿ ಅಳಲು ತೋಡಿಕೊಂಡಿದ್ದರು ಎಂದು ಮೃತ ವಿದ್ಯಾರ್ಥಿನಿಯ ತಾಯಿ ದೂರಿದ್ದಾರೆ. ಈ ವಿಷಯದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡುವಂತೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ನಾಯರ್ ಆಸ್ಪತ್ರೆಯ ಡೀನ್‌ಗೆ ನೋಟಿಸ್ ಜಾರಿಗೊಳಿಸಿದೆ.

ಈ ಮಧ್ಯೆ, ಮಹಾರಾಷ್ಟ್ರ ನಿವಾಸಿ ವೈದ್ಯರ ಸಂಘ(ಎಂಎಆರ್‌ಡಿ) ಮೂವರು ಆರೋಪಿ ವೈದ್ಯರನ್ನು ಅಮಾನತುಗೊಳಿಸಿದೆ. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಸೋಮವಾರ ಆರೋಪಿ ವೈದ್ಯರು ಎಂಎಆರ್‌ಡಿಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News