‘ಸಾಂಸ್ಥಿಕ ಕೊಲೆ ’ಯ ವಿರುದ್ಧ ಕ್ರಮಕ್ಕೆ ಎರಡು ಹೆಲ್ತ್ ನೆಟ್‌ವರ್ಕ್‌ಗಳ ಆಗ್ರಹ

Update: 2019-05-28 17:25 GMT

ಮುಂಬೈ,ಮೇ 28: ಜಾತಿನಿಂದನೆಯಿಂದ ನೊಂದು ಮೇ 22ರಂದು ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡ ಆದಿವಾಸಿ ಸಮುದಾಯದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ.ಪಾಯಲ್ ತಡ್ವಿ ಅವರಿಗೆ ನ್ಯಾಯವನ್ನು ಒದಗಿಸುವಂತೆ ಆರೋಗ್ಯ ಜಾಲಬಂಧಗಳಾದ ಜನ ಸ್ವಾಸ್ಥ ಅಭಿಯಾನ ಮತ್ತು ಮೆಡಿಕೊ ಫ್ರೆಂಡ್ ಸರ್ಕಲ್ ಮಂಗಳವಾರ ಆಗ್ರಹಿಸಿವೆ. ಡಾ.ಪಾಯಲ್ ಆತ್ಮಹತ್ಯೆಯನ್ನು ‘ಸಾಂಸ್ಥಿಕ ಕೊಲೆ ’ ಎಂದು ಅವು ಬಣ್ಣಿಸಿವೆ.

‘‘ ಡಾ.ಪಾಯಲ್ ತಡ್ವಿ ಅವರ ಸಾಂಸ್ಥಿಕ ಕೊಲೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆದಿವಾಸಿ ಸಮುದಾಯದ ಯುವವೈದ್ಯೆಯಾಗಿದ್ದ ಅವರು ತನ್ನ ಕುಟುಂಬದಲ್ಲಿ ಮೊದಲ ವೈದ್ಯೆ ಮತ್ತು ತನ್ನ ಸಮುದಾಯದಲ್ಲಿ ಮೊದಲ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯಾಗುವಲ್ಲಿ ಸಾಮಾಜಿಕ ತಾರತಮ್ಯದ ಕಟ್ಟುಪಾಡುಗಳನ್ನು ಮುರಿದಿದ್ದರು. ಡಾ.ಪಾಯಲ್ ಅವರ ಆತ್ಮಹತ್ಯೆಗೆ ಕಾರಣವಾದ ಮೇಲ್ಜಾತಿಗಳ ಹಿರಿಯ ವೈದ್ಯರಿಂದ ಜಾತೀಯ ಶೋಷಣೆ ಮತ್ತು ಅವಹೇಳನದ ವಿರುದ್ಧ ತುರ್ತು ಕ್ರಮಕ್ಕೆ ನಾವು ಆಗ್ರಹಿಸುತ್ತೇವೆ ’’ ಎಂದು ಅವು ಹೇಳಿಕೆಯಲ್ಲಿ ತಿಳಿಸಿವೆ.

ಗೈನಾಕಾಲಜಿಯಲ್ಲಿ ಸ್ನಾತಕೋತ್ತರ ವ್ಯಾಸಂಗಕ್ಕಾಗಿ 2018,ಮೇ 1ರಂದು ಡಾ.ಪಾಯಲ್ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜನ್ನು ಸೇರಿದಾಗಿನಿಂದಲೂ ಮೂವರು ವೈದ್ಯರು ಅವರಿಗೆ ಕಿರುಕುಳಗಳನ್ನು ನೀಡುತ್ತಿದ್ದರು. ಅವರ ವಿರುದ್ಧ ತಾರತಮ್ಯ ಮತ್ತು ಬೆದರಿಕೆಗಳನ್ನು ಮುಂದುವರಿಸಿದ್ದ ಅವರು ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅಥವಾ ಹೆರಿಗೆಗಳನ್ನು ಮಾಡಿಸಲು ಅವಕಾಶ ನೀಡಿರಲಿಲ್ಲ. ಪಾಯಲ್ ಮತ್ತು ಅವರ ಹೆತ್ತವರು ಪದೇ ಪದೇ ದೂರುಗಳನ್ನು ಸಲ್ಲಿಸಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಇದರಿಂದ ನೊಂದು ಪಾಯಲ್ ಟೋಪಿವಾಲಾ ಕಾಲೇಜಿಗೆ ಸೇರಿದ ನಾಯರ್ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.

ಮಹಾರಾಷ್ಟ್ರ ಕಿರಿಯ ವೈದ್ಯರ ಸಂಘವು ಮೂವರು ಆರೋಪಿಗಳನ್ನು ಅಮಾನತುಗೊಳಿಸಿದೆಯಾದರೂ ಅದು ಪತ್ರಿಕಾ ಹೇಳಿಕೆಯಲ್ಲಿ ತಾರತಮ್ಯ ಅಥವಾ ಜಾತಿನಿಂದನೆಯನ್ನು ಉಲ್ಲೇಖಿಸುವುದನ್ನು ಕಡೆಗಣಿಸುವ ಮೂಲಕ ಪಾಯಲ್ ಅವರ ಸಾವಿಗೆ ಕಾರಣವಾದ ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿರುವ ಉಭಯ ಸಂಸ್ಥೆಗಳು,ಪಾಯಲ್ ಸಾವನ್ನು ರ್ಯಾಗಿಂಗ್‌ನ ಪರಿಣಾಮ ಎಂದು ಬಿಂಬಿಸಲು ಪತ್ರಿಕಾ ಹೇಳಿಕೆಯು ಪ್ರಯತ್ನಿಸಿದೆ ಎಂದು ಆರೋಪಿಸಿದೆ.

ಅನಿಲ ಕುಮಾರ ಮೀನಾ,ರೋಹಿತ ವೇಮುಲ ಮತ್ತು ಪಾಯ್ಲ ತಡ್ವಿ ಬಹುಶಃ ಜಾತೀಯತೆಯಿಂದಾಗಿ ಸಾಂಸ್ಥಿಕ ಕೊಲೆಗೀಡಾದ ಕೆಲವೇ ಗೊತ್ತಿರುವ ಹೆಸರುಗಳಾಗಿವೆ. ಜಾತೀಯ ತಾರತಮ್ಯ ಮತ್ತು ನಿಂದನೆಯಿಂದಾಗಿ ಹಲವಾರು ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಉನ್ನತ ಶಿಕ್ಷಣವನ್ನ್ನು ಮೊಟಕುಗೊಳಿಸಿದ್ದಾರೆ ಎನ್ನುವುದನ್ನು ತೋರಿಸುವ ಸಾಕ್ಷಾಧಾರಗಳಿವೆ ಎಂದು ಉಭಯ ಸಂಸ್ಥೆಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News