ಎಚ್‌ಐವಿ ಸೋಂಕು ತನಿಖೆಯಲ್ಲಿ ಡಬ್ಯುಎಚ್‌ಒ ನೆರವು ಕೋರಿದ ಪಾಕ್

Update: 2019-05-28 17:29 GMT

ಕರಾಚಿ, ಮೇ 28: ಸಿಂಧ್ ಪ್ರಾಂತದಲ್ಲಿ ಇತ್ತೀಚೆಗೆ ಎಚ್‌ಐವಿ ಸೋಂಕು ಹರಡಿರುವುದಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸಹಾಯ ಮಾಡುವಂತೆ ಪಾಕಿಸ್ತಾನ ಸರಕಾರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯನ್ನು ಕೋರಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಸಿಂಧ್ ಪ್ರಾಂತದ ವಾಯುವ್ಯ ಭಾಗದ ಲರ್ಕಾನ ಜಿಲ್ಲೆಯ ರಟೊಡೆರೊ ಪಟ್ಟಣದಲ್ಲಿ 21,375 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಈವರೆಗೆ 681 ಎಚ್‌ಐವಿ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಅವರ ಪೈಕಿ 537 ಮಂದಿ 2ರಿಂದ 15 ವರ್ಷದ ಒಳಗಿನವರು.

ವೈದ್ಯರಿಂದ ಅಸುರಕ್ಷಿತ ಉಪಕರಣಗಳ ಬಳಕೆ, ಅಸುರಕ್ಷಿತ ರಕ್ತ ವರ್ಗಾವಣೆ ಮತ್ತು ನಕಲಿ ವೈದ್ಯರು ವ್ಯಾಪಕವಾಗಿ ನಡೆಸುವ ದುರ್ವ್ಯವಹಾರಗಳೇ ಎಚ್‌ಐವಿ ಪ್ರಕರಣಗಳಿಗೆ ಕಾರಣ ಎಂಬುದಾಗಿ ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ.

‘‘ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳ (ಸಿಡಿಸಿ) 10 ಮಂದಿ ಸದಸ್ಯರ ಕ್ಷಿಪ್ರ ಪ್ರತಿಕ್ರಿಯಾ ತಂಡವೊಂದು ಕೆಲವೇ ದಿನಗಳಲ್ಲಿ ಬರುವ ನಿರೀಕ್ಷೆಯಿದೆ. ಆ ಬಳಿಕ, ರಟಡೆರೊ ಪಟ್ಟಣದಲ್ಲಿ ಎಚ್‌ಐವಿ ಸೋಂಕು ಭಾರೀ ಪ್ರಮಾಣದಲ್ಲಿ ಹರಡಲು ಕಾರಣವೇನು ಎನ್ನುವುದು ತಿಳಿಯುತ್ತದೆ’’ ಎಂದು ಪ್ರಧಾನಿಯ ರಾಷ್ಟ್ರೀಯ ಆರೋಗ್ಯ ಸೇವೆಗಳ ವಿಶೇಷ ಸಹಾಯಕ ಝಾಫರ್ ಮಿರ್ಝಾ ಹೇಳಿರುವುದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಸಿಡಿಸಿಯು ಅಮೆರಿಕದಲ್ಲಿರುವ ಪ್ರಮುಖ ಸಾರ್ವಜನಿಕ ಆರೋಗ್ಯ ಸೇವೆಗಳ ಸಂಸ್ಥೆಯಾಗಿದೆ. ಅದು ಪಾಕಿಸ್ತಾನದಲ್ಲಿ ಹಲವಾರು ಸಾರ್ವಜನಿಕ ಆರೋಗ್ಯ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News