ಭಾರತ ತಂಡಕ್ಕೆ ವಾಪಸಾದ ರಮಣ್‌ದೀಪ್ ಸಿಂಗ್

Update: 2019-05-29 06:34 GMT

ಹೊಸದಿಲ್ಲಿ, ಮೇ 28: ಭುವನೇಶ್ವರದಲ್ಲಿ ಜೂ.6 ರಿಂದ ಆರಂಭವಾಗಲಿರುವ ಎಫ್‌ಐಎಚ್ ಪುರುಷರ ಸರಣಿ ಫೈನಲ್ಸ್‌ಗೆ ಹಾಕಿ ಇಂಡಿಯಾ ಮಂಗಳವಾರ 18 ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಿದೆ.

ಭಾರತೀಯ ಹಾಕಿ ತಂಡವನ್ನು ಮನ್‌ಪ್ರೀತ್ ಸಿಂಗ್ ನಾಯಕನಾಗಿ ಮುನ್ನಡೆಸಲಿದ್ದು, ಬೀರೇಂದ್ರ ಲಕ್ರಾ ಉಪ ನಾಯಕನಾಗಿರುತ್ತಾರೆ. ಅನುಭವಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಹಾಗೂ ಕೃಷ್ಣ ಬಿ.ಪಾಠಕ್ ಭಾರತದ ಗೋಲ್‌ಪೋಸ್ಟ್ ಕಾಯಲಿದ್ದಾರೆ. ಹರ್ಮನ್‌ಪ್ರೀತ್ ಸಿಂಗ್, ಬೀರೇಂದ್ರ ಲಕ್ರಾ, ಸುರೇಂದರ್ ಕುಮಾರ, ವರುಣ್ ಕುಮಾರ, ಅಮಿತ್ ರೋಹಿದಾಸ್ ಹಾಗೂ ಗುರಿಂದರ್ ಸಿಂಗ್ ಭಾರತದ ಡಿಫೆಂಡರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಫಾರ್ವರ್ಡ್ ಆಟಗಾರ ರಮಣ್‌ದೀಪ್ ಸಿಂಗ್ ಸೇರ್ಪಡೆ ಅತ್ಯಂತ ಪ್ರಮುಖ ಅಂಶವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಗ್ ಇದೀಗ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ. ಸಿಂಗ್ ಕಳೆದ ವರ್ಷ ಬ್ರೆಡಾದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದರು. ಆ ಬಳಿಕ ಅವರು ಮಂಡಿನೋವಿನಿಂದಾಗಿ ಸಕ್ರಿಯ ಹಾಕಿಯಿಂದ ದೂರ ಸರಿದಿದ್ದರು.

ರಮಣ್‌ದೀಪ್ ಫಾರ್ವರ್ಡ್ ಲೈನ್‌ನಲ್ಲಿ ಮನ್‌ದೀಪ್ ಸಿಂಗ್, ಗುರುಸಾಹಿಬ್‌ಜೀತ್ ಸಿಂಗ್, ಸಿಮ್ರಾನ್‌ಜೀತ್ ಸಿಂಗ್ ಹಾಗೂ ಆಕಾಶ್‌ದೀಪ್ ಸಿಂಗ್‌ರನ್ನು ಸೇರಿಕೊಳ್ಳಲಿದ್ದಾರೆ. ಮಿಡ್‌ಫೀಲ್ಡ್ ನಲ್ಲಿ ಮನ್‌ಪ್ರೀತ್ ಪ್ರಮುಖ ಪಾತ್ರವಹಿಸಲಿದ್ದು, ಯುವ ಆಟಗಾರರಾದ ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಸುಮೀತ್ ಹಾಗೂ ನೀಲಕಂಠ ಶರ್ಮಾ ಅವರಿದ್ದಾರೆ.

ಟೂರ್ನಮೆಂಟ್‌ನಲ್ಲಿ ಭಾರತದ ತಯಾರಿಯ ಕುರಿತು ಮಾತನಾಡಿದ ಕೋಚ್ ಗ್ರಹಾಂ ರೆಡ್,‘‘ಟೂರ್ನಮೆಂಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವತ್ತ ಗಮನ ಹರಿಸಲಿದ್ದೇವೆ. ಈ ಸಾಧನೆ ಮಾಡಲು ನಾವು ಪ್ರತಿಯೊಂದು ಎದುರಾಳಿ ತಂಡವನ್ನು ಗೌರವಿಸಬೇಕು ಹಾಗೂ ಪ್ರತಿ ಪಂದ್ಯದಲ್ಲೂ ಶೇ.100ರಷ್ಟು ಶ್ರಮ ಹಾಕಬೇಕಾಗಿದೆ’’ ಎಂದರು.

‘‘ಗಾಯದಿಂದ ಚೇತರಿಸಿಕೊಂಡು ವಾಪಸಾಗಿರುವ ರಮಣ್‌ದೀಪ್ ಸಿಂಗ್ ಹಾಗೂ ಆಸ್ಟ್ರೇಲಿಯ ಪ್ರವಾಸದಲ್ಲಿ ವಿಶ್ರಾಂತಿ ಪಡೆದಿದ್ದ ವರುಣ್ ಕುಮಾರ್ ಸೇರಿದಂತೆ ಉತ್ತಮ ಸಮತೋಲಿತ ತಂಡವನ್ನು ಆಯ್ಕೆ ಮಾಡಿದ್ದೇವೆ. ಸುಮಿತ್ ಹಾಗೂ ಅಮಿತ್ ರೋಹಿದಾಸ್ ವಾಪಸಾತಿಯಿಂದಾಗಿ ನಮ್ಮ ರಕ್ಷಣಾ ಸಾಮರ್ಥ್ಯ ಹಾಗೂ ಪೆನಾಲ್ಟಿ ಕಾರ್ನರ್ ಬಲಿಷ್ಠವಾಗಿದೆ. ವಿಶ್ವದ ಶ್ರೇಷ್ಠ ತಂಡಗಳೊಂದಿಗೆ ಸ್ಪರ್ಧೆ ಒಡ್ಡಲು ಹೇಗೆ ಆಡಬೇಕಾದ ಅಗತ್ಯವಿದೆ ಎಂದು ತಿಳಿದುಕೊಳ್ಳಲು ಆಸ್ಟ್ರೇಲಿಯ ಪ್ರವಾಸ ನಮಗೆ ನೆರವಾಗಿದೆ. ಪೆನಾಲ್ಟಿ ಕಾರ್ನರ್ ಅತ್ಯಂತ ಮುಖ್ಯವಾಗಿದ್ದು, ಟೂರ್ನಿಯ ವೇಳೆ ಮೂರು ಡ್ರಾಗ್ ಫ್ಲಿಕರ್‌ಗಳನ್ನು ಆಯ್ಕೆ ಮಾಡಿದ್ದೇವೆ’’ ಎಂದು ರೆಡ್ ಹೇಳಿದ್ದಾರೆ.

ಟೂರ್ನಮೆಂಟ್‌ನಲ್ಲಿ ಭಾರತ ‘ಎ’ ಗುಂಪಿನಲ್ಲಿ ರಶ್ಯ, ಪೊಲ್ಯಾಂಡ್ ಹಾಗೂ ಉಜ್ಬೇಕಿಸ್ತಾನದೊಂದಿಗೆ ಸ್ಥಾನ ಪಡೆದಿದೆ. 18ನೇ ಆವೃತ್ತಿಯ ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನ್, ಮೆಕ್ಸಿಕೊ, ಅಮೆರಿಕ ಹಾಗೂ ದಕ್ಷಿಣ ಆಫ್ರಿಕ ‘ಬಿ’ ಗುಂಪಿನಲ್ಲಿವೆ.

ಜೂ.6 ರಂದು ರಶ್ಯ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಈ ವರ್ಷಾಂತ್ಯದಲ್ಲಿ ನಡೆಯುವ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಅರ್ಹತೆ ಪಡೆಯಲು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ಗುರಿ ಹಾಕಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News