ದುಬಾರಿ ಬಡ್ಡಿ: 7 ಫೈನಾನ್ಸ್ ಕಚೇರಿಗಳ ಮೇಲೆ ದಾಳಿ; 6 ಬಂಧನ

Update: 2019-05-29 14:31 GMT

ಬೆಂಗಳೂರು, ಮೇ 29: ಸಾರ್ವಜನಿಕರಿಗೆ ಹಣ ನೀಡಿ, ದುಬಾರಿ ಬೆಲೆ ಬಡ್ಡಿ ಪಡೆಯುತ್ತಿದ್ದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಸಿಸಿಬಿ ಪೊಲೀಸರು, ನಗರ ನಾನಾ ಕಡೆಯ ಇರುವ ಫೈನಾನ್ಸ್ ಕಚೇರಿಗಳ ಮೇಲೆ ದಾಳಿ, ನಗದು, ಲೇವಾದೇವಿ ವಹಿವಾಟು ದಾಖಲೆ ಪತ್ರಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಕಲಾಸಿಪಾಳ್ಯದ ಆಶಿಶ್ ಮೆಟಲ್ಸ್, ಶಾರದ ಟಾಕೀಸು ಬಳಿಯ ರಾಜೀವ್ ಫೈನಾನ್ಸ್, ಶಾಂತಿನಗರದ ಸಂಜಯ್ ಫೈನಾನ್ಸ್, ರಾಜಾಸಾಬ್ ಫೈನಾನ್ಸ್, ಜೆಪಿ ನಗರದ ಸ್ಕಂದ ಎಂಟರ್‌ಪ್ರಸೈಸ್, ವೈಷ್ಣವಿ ಹೊಲ್ಡಿಂಗ್ ಹಾಗೂ ಹನುಮಂತನಗರದ ಹೇಮಲತಾ ಫೈನಾನ್ಸ್ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ಎಜೆಂಟ್‌ಗಳ ಮೂಲಕ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಲಲೀತ್ ಕಾನೂಗ, ಆಶೀಸ್ ಜೈನ್, ಸಂಜಯ್ ಸಚ್‌ದೇವ್, ಚಂದ್ರು ಅರ್ಜುನ್ ದಾಸ್, ಓಂ. ಪ್ರಕಾಶ್ ಸಚ್ಚ್‌ದೇವ್ ಹಾಗೂ ಮಾತಾ ಪ್ರಸಾದ್ ತಿವಾರಿ ಎಂಬುವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಏನಿದು ವ್ಯವಹಾರ?: ಒಬ್ಬ ವ್ಯಕ್ತಿಗೆ 7.5 ಲಕ್ಷ ಸಾಲದ ಮೊತ್ತಕ್ಕೆ ಬರೀ 5.5 ಲಕ್ಷ ನೀಡಿ, ಪ್ರತಿ ತಿಂಗಳು ತಲಾ 75 ಸಾವಿರ ರೂ.ಗಳು ಪಾವತಿಸುವಂತೆ ಭದ್ರತೆಗಾಗಿ 10 ಚೆಕ್‌ಗಳನ್ನು ಪಡೆದುಕೊಂಡು ಸಾಲ ನೀಡಲಾಗುತ್ತದೆ.

ಕ್ರಮೇಣ ಸಾಲ ಪಡೆದ ಸಾಲಗಾರರು, ತೆಗೆದುಕೊಂಡ ಸಾಲದ ಹಣದಲ್ಲಿ 2ರಷ್ಟು ಕಮಿಷನ್ ಏಜೆಂಟ್‌ಗಳಿಗೆ ನೀಡಬೇಕೆಂದು ಹೇಳಲಾಗುತ್ತದೆ. ಹೀಗೆ ಸಾಲಗಾರರು ಪ್ರತಿ ತಿಂಗಳ ಸಾಲವನ್ನು ಮರು ಪಾವತಿಸಿದರೆ ಅದಕ್ಕೆ ಸಂಬಂಧಿಸಿದ ಚೆಕ್ ಸಾಲಗಾರರಿಗೆ ವಾಪಸ್ಸು ನೀಡುತ್ತಾರೆ. ಒಂದು ವೇಳೆ ನಿಗಧಿತ ಸಮಯದಲ್ಲಿ ಸಾಲ ಮರುಪಾವತಿಸದೆ ಇದ್ದಲ್ಲಿ, ಸಾಲಗಾರರ ವ್ಯಾಪಾರ, ಮನೆಗಳ ಹತ್ತಿರ ಎಜೆಂಟ್‌ಗಳನ್ನು ಕಳುಹಿಸಿ ಬೆದರಿಕೆ ಹಾಕಿ ಹಣ ವಸೂಲು ಮಾಡುತ್ತಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News