ರೌಡಿ ಲಕ್ಷ್ಮಣ ಕೊಲೆ ಪ್ರಕರಣ: ಆರೋಪಿಗಳ ವಿರುದ್ಧ ‘ಕೋಕಾ’

Update: 2019-05-29 15:16 GMT

ಬೆಂಗಳೂರು, ಮೇ 29: ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅನ್ನು ಸಿಸಿಬಿ ಜಾರಿ ಮಾಡಿದೆ.

ಪ್ರಕರಣ ಪ್ರಮುಖ ಆರೋಪಿಗಳಾದ ರಾಜ ಯಾನೆ ಕ್ಯಾಟ್ ರಾಜ ಹಾಗೂ ಹೇಮಂತ್ ಎಂಬುವರ ವಿರುದ್ಧ ಕೋಕಾ ಜಾರಿಗೊಳಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಏನಿದು ಪ್ರಕರಣ?: ಮಾ.7ರಂದು ಇಲ್ಲಿನ ಇಸ್ಕಾನ್ ದೇವಾಲಯದ ಸಮೀಪ ರೌಡಿ ಲಕ್ಷ್ಮಣನನ್ನು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಪ್ರಕರಣವನ್ನು ತನಿಖೆ ನಡೆಸಿದ ಸಿಸಿಬಿ ಪೊಲೀಸರು, ವರ್ಷಿಣಿ ಎಂಬಾಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಕೆಯ ಪ್ರೇಮಿ ರೂಪೇಶ್ ಜೊತೆ ಸೇರಿ ರಾಜ, ಹೇಮಂತ್ ಎಂಬುವರನ್ನು ಸಂಪರ್ಕಿಸಿ, ಕೊಲೆಗೆ ಒಪ್ಪಿಸಲಾಗಿತ್ತು. ಈ ಸಂಬಂಧ 12 ಆರೋಪಿಗಳನ್ನು ಬಂಧಿಸಲಾಗಿತ್ತು.

ಬಂಧಿತರ ಪೈಕಿ ರಾಜ ಮತ್ತು ಹೇಮಂತ್ ಸುಫಾರಿ ಕೊಲೆಗಾರರಾಗಿದ್ದು, ತಮ್ಮದೇ ಹುಡುಗರ ಗುಂಪು ಕಟ್ಟಿಕೊಂಡು, ಹಣಕ್ಕಾಗಿ ಸಾರ್ವಜನಿಕರನ್ನು ಬೆದರಿಸಿ, ದರೋಡೆ ಮಾಡುತ್ತಿದ್ದರು. ಈ ಹಿನ್ನೆಲೆ ಆರೋಪಿಗಳ ಕೃತ್ಯಗಳನ್ನು ತಡೆಗಟ್ಟುವ ಸಲುವಾಗಿ ಕೋಕಾ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಸಿಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News