ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರಾಸಕ್ತಿ ತೋರಿದ ಬೆಂಗಳೂರಿಗರು

Update: 2019-05-29 16:32 GMT

ಬೆಂಗಳೂರು, ಮೇ 29: ಬಿಬಿಎಂಪಿಯ ಎರಡು ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಶೇ.50 ಕ್ಕಿಂತ ಕಡಿಮೆ ಮತದಾನವಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಬೆಂಗಳೂರಿಗರು ನಿರಾಸಕ್ತಿ ತೋರಿರುವುದು ಮತ್ತೊಮ್ಮೆ ಸಾಬೀತಾಗಿದೆ.

ನಗರದ ಕಾವೇರಿಪುರ ವಾರ್ಡ್‌ನಲ್ಲಿ ಶೇ. 39.54, ಸಗಾಯಪುರ ವಾರ್ಡ್‌ನಲ್ಲಿ ಶೇ.44.71ರಷ್ಟು ಮತದಾನವಾಗಿದೆ. ಕಳೆದ ಒಂದು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಸುಮಾರು ಶೇ. 50ರಷ್ಟು ಮತದಾನ ಆಗಿತ್ತು. ಆದರೆ, ಸ್ಥಳೀಯ ಸಂಸ್ಥೆಗಳಿಗೆ ನಡೆದ ಉಪಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ.

ಕಾವೇರಿಪುರ ವಾರ್ಡ್‌ನಲ್ಲಿ 49,237 ಮತದಾರರಿದ್ದು, 19,470 ಮತಗಳು ಚಲಾವಣೆಯಾಗಿವೆ. ಅದರಲ್ಲಿ ಪುರುಷರು 10,117, ಮಹಿಳೆಯರು 9,353 ಮತ ಚಲಾವಣೆ ಮಾಡಿದ್ದಾರೆ. ಸಗಾಯಪುರ ವಾರ್ಡ್‌ನಲ್ಲಿ 31,928 ಮತದಾರರಿದ್ದು, ಅದರಲ್ಲಿ 14,310 ಮತಗಳು ಚಲಾವಣೆಯಾಗಿವೆ. ಪುರುಷರು 7,009, ಮಹಿಳೆಯರು 7,299 ಮತ ಚಲಾಯಿಸಿದ್ದಾರೆ.

ಯಾವ ಸಮಯದಲ್ಲಿ ಎಷ್ಟು ಮತದಾನ?: ಸಗಾಯಪುರ ವಾರ್ಡ್‌ನಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, 9 ಗಂಟೆಯೊಳಗೆ ಶೇ. 7.74 ರಷ್ಟು, 11 ಗಂಟೆಯೊಳಗೆ 17.27 ರಷ್ಟು, ಮಧ್ಯಾಹ್ನ 1ಗಂಟೆಯೊಳಗೆ 26.61ರಷ್ಟು, 3 ಗಂಟೆಗೆ 34.45 ರಷ್ಟು, 5 ಗಂಟೆಯೊಳಗೆ 44.71 ರಷ್ಟು ಮತದಾನವಾಗಿದೆ.

ಇನ್ನು ಕಾವೇರಿಪುರ ವಾರ್ಡ್‌ನಲ್ಲಿ 9 ಗಂಟೆಯೊಳಗೆ ಶೇ. 9.33, 11ಗಂಟೆಯೊಳಗೆ 17.95, ಮಧ್ಯಾಹ್ನ 1 ಗಂಟೆಯೊಳಗೆ ಶೇ. 25.93, 3 ಗಂಟೆಯೊಳಗೆ 31.79, ಸಂಜೆ 5 ಗಂಟೆಯೊಳಗೆ ಶೇ. 39.54 ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News