ಭೂ ಸ್ವಾಧೀನವಿಲ್ಲದೆ ಕಾರಿಡಾರ್ ಯೋಜನೆಯ ಕಾಮಗಾರಿ: ಬಿಬಿಎಂಪಿ ಆಯುಕ್ತರನ್ನು ತರಾಟೆಗೆ ತೆಗೆದ ಹೈಕೋರ್ಟ್
ಬೆಂಗಳೂರು, ಮೇ 29: ಓಕಳಿಪುರಂನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ 8 ಪಥದ ಕಾರಿಡಾರ್ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳದೆ ಕಾಮಗಾರಿ ನಡೆಸುತ್ತಿರುವುದಕ್ಕೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಈ ಕುರಿತು ಮೆಸರ್ಸ್ ಖೋಡೆ ಈಶ್ವರ್ ಅಂಡ್ ಸನ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಕಾಮಗಾರಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡಿ, ಪಾಲಿಕೆಗೆ ಕಾಮಗಾರಿ ಮುಂದುವರಿಕೆಗೆ ಅವಕಾಶ ನೀಡಿತು. ಅಲ್ಲದೆ, ವಿಚಾರಣೆಯನ್ನು ಜೂ.11ಕ್ಕೆ ಮುಂದೂಡಿದ ನ್ಯಾಯಪೀಠವು ಅಷ್ಟರೊಳಗೆ ವಿವರವಾದ ವರದಿಯನ್ನು ಸಲ್ಲಿಸಬೇಕು. ಅರ್ಜಿದಾರರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಬಳಕೆ ಮಾಡಿಕೊಂಡಿದ್ದಕ್ಕೆ ಸೂಕ್ತ ಪರಿಹಾರ ನೀಡಬೇಕಾಗುತ್ತದೆ. ಯೋಜನೆಯ ಕಾಮಗಾರಿ ವಿಳಂಬವಾಗಿ ವೆಚ್ಚ ಅಧಿಕವಾದರೆ ಅದನ್ನು ಅಧಿಕಾರಿಗಳು ತಮ್ಮ ಜೇಬಿನಿಂದ ಭರಿಸಬೇಕಾಗುತ್ತದೆ ಎಂದು ಎಂದು ಹೇಳಿದರು.
ಭೂ ಸ್ವಾಧೀನ ಮಾಡಿಕೊಳ್ಳದೆ ಹೇಗೆ ಕಾಮಗಾರಿ ಆರಂಭಿಸಿದ್ದೀರಿ. ಭೂಮಿ ನಿಮ್ಮದಲ್ಲ, ಆದರೂ ಕಾಮಗಾರಿಗೆ ಕೋಟ್ಯಂತರ ರೂ.ಹಣ ಹೇಗೆ ವ್ಯಯ ಮಾಡುತ್ತಿದ್ದೀರಿ. ಇದಕ್ಕೆ ಯಾವ ಅಧಿಕಾರಿ ಹೊಣೆ ಎಂಬುದನ್ನು ನಿಗದಿಪಡಿಸಿ ಎಂದು ನ್ಯಾಯಪೀಠ ಕೇಳಿತು. ಭೂ ಸ್ವಾಧೀನ ಮಾಡಿಕೊಳ್ಳದೆ ಕಾಮಗಾರಿ ಆರಂಭಿಸಿದ ಅಧಿಕಾರಿಯ ಹೆಸರು ನಮಗೆ ನೀಡಿ, ಆಯುಕ್ತರೆ ನಿಮ್ಮ ಕೈಕೆಳಗೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ. ಇದೆಲ್ಲ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಅರ್ಜಿದಾರರ ಪರ ವಾದಿಸಿದ ವಕೀಲರು, ಕಾರಿಡಾರ್ ಯೋಜನೆಗೆ ಖೋಡೆ ಕುಟುಂಬದವರಿಗೆ ಸೇರಿದ ಭೂಮಿಯಲ್ಲಿ 196.557 ಚದರ ಮೀಟರ್ ಅನ್ನು ನಿಯಮದ ಪ್ರಕಾರ ಸ್ವಾಧೀನಪಡಿಸಿಕೊಂಡಿದೆ. ಆದರೆ, ಇನ್ನುಳಿದ 297 ಚದರ ಮೀಟರ್ ಅನ್ನು ಸ್ವಾಧೀನಪಡಿಸಿಕೊಳ್ಳದೆ ಆ ಜಾಗದಲ್ಲಿ ಬಾಕ್ಸ್ ಅಳವಡಿಸಿ ಕಾಮಗಾರಿ ನಡೆಸುತ್ತಿದ್ದಾರೆ. ಹೀಗಾಗಿ, ಬಿಬಿಎಂಪಿಗೆ ಅಗತ್ಯ ನಿರ್ದೇಶನ ನೀಡಬೇಕೆಂದು ಕೋರಿದರು.