×
Ad

ರಾಜ್ಯಾದ್ಯಂತ ಶಾಲೆಗಳ ಆರಂಭ: ಉತ್ಸಾಹದಿಂದ ಹಾಜರಾದ ವಿದ್ಯಾರ್ಥಿಗಳು

Update: 2019-05-29 22:37 IST

ಬೆಂಗಳೂರು, ಮೇ 29: ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭಗೊಳ್ಳಲಿದ್ದು, ಕಳೆದ ಎರಡು ತಿಂಗಳಿನಿಂದ ರಜೆಯ ಮಜೆಯಲ್ಲಿದ್ದ ಮಕ್ಕಳು ಅತ್ಯಂತ ಉತ್ಸಾಹದಿಂದ ಶಾಲೆಗಳಿಗೆ ತೆರಳಿದರು.

ಮಕ್ಕಳನ್ನು ಸ್ವಾಗತಿಸಲು ರಾಜ್ಯದ ಎಲ್ಲೆಡೆ ಶಾಲೆಗಳನ್ನು ಸುಣ್ಣ, ಬಣ್ಣಗಳಿಂದ ಸಿಂಗಾರ ಮಾಡಲಾಗಿತ್ತು. ಕಲಿಕೆ, ಪರೀಕ್ಷೆ, ಫಲಿತಾಂಶ ನಂತರ ವಾರ್ಷಿಕ ರಜೆಗಳನ್ನು ಮುಗಿಸಿಕೊಂಡು ಶಾಲೆಗಳ ಕಡೆ ಮಕ್ಕಳು ಮುಖ ಮಾಡಿದ್ದಾರೆ. ಹೊಸ ಪುಸ್ತಕ, ಪಠ್ಯಗಳ ಮೂಲಕ ಕಲಿಕೆ ಆರಂಭಿಸಲಿದ್ದಾರೆ.

ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಹಲವು ಹಂತಗಳಲ್ಲಿ ಶಿಕ್ಷಕರು ಪೋಷಕರಿಗೆ ಮನವೊಲಿಸಿದ್ದಾರೆ. ಒಂದು ತಿಂಗಳ ಕಾಲ ದಾಖಲಾತಿಗಳು ಮುಂದುವರಿಯಲಿವೆ. ಬೇಸಿಗೆ ರಜೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಈಗ ಸರಕಾರಿ ಶಾಲೆಗಳ ಕಡೆಗೆ ಬರುತ್ತಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ರಾಜ್ಯಾದ್ಯಂತ 50 ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳಿವೆ. ಎಲ್ಲ ಶಾಲೆಗಳನ್ನು ಸಿಂಗರಿಸಿದ್ದು, ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಮಂಗಳವಾರವೇ ಎಲ್ಲೆಡೆ ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಚಗೊಳಿಸಿದ್ದರು. ಕುಡಿಯುವ ನೀರು, ಬಿಸಿಯೂಟಕ್ಕೆ ಬೇಕಾದ ಎಲ್ಲ ಅಗತ್ಯಗಳನ್ನು ಕೈಗೊಳ್ಳಲಾಗಿತ್ತು. ಮೊದಲ ದಿನ ಎಲ್ಲ ಶಾಲೆಗಳಲ್ಲಿ ಸಿಹಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸುವ ಮೂಲಕ ಮಕ್ಕಳನ್ನು ಶಾಲೆಗಳಿಗೆ ಸ್ವಾಗತಿಸಿದರು.

ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಮಕ್ಕಳಿಗೆ ಅಗತ್ಯವಾದ ಪಠ್ಯಪುಸ್ತಕ, ಬಟ್ಟೆ, ಶೂಗಳನ್ನು ಖರೀದಿ ಮಾಡಿ ಸರಬರಾಜು ಮಾಡಲಾಗಿದೆ. ಈ ಬಾರಿ ವಿದ್ಯಾರ್ಥಿಗಳು ಝೆರಾಕ್ಸ್‌ಗಳ ಮೂಲಕ ಅಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News