ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ: ಕಾಂಗ್ರೆಸ್ ಮುಖಂಡರ ತೀರ್ಮಾನ

Update: 2019-05-30 15:11 GMT

ಬೆಂಗಳೂರು, ಮೇ 30: ‘ಆಪರೇಷನ್ ಕಮಲ ಭೀತಿ’ ಹಿನ್ನೆಲೆಯಲ್ಲಿ ಬಂಡಾಯ ಶಾಸಕರ ಮನವೊಲಿಸುವಲ್ಲಿ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದು, ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನಾರಚನೆ ಮಾಡದಿರಲು ಸಚಿವರು-ಶಾಸಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಗುರುವಾರ ಇಲ್ಲಿನ ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ನಡೆದ ಉಪಾಹಾರಕೂಟ ಸಭೆಯಲ್ಲಿ ಹಿರಿಯ ಸಚಿವರ ರಾಜೀನಾಮೆಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಗೊತ್ತಾಗಿದೆ.

ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎರಡು ದಿನಗಳಿಂದ ಸಚಿವರು, ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ನಿನ್ನೆಯ ಶಾಸಕಾಂಗ ಸಭೆಯಲ್ಲಿ ಶಾಸಕರ ನೀಡಿದ ಸಲಹೆಗಳನ್ನು ಚರ್ಚಿಸಲಾಗಿದೆ. ರಾಜ್ಯದಲ್ಲಿ ಸ್ಥಿರ ಸರಕಾರ ನೀಡುವ ಕುರಿತು ಚರ್ಚಿಸಿದ್ದೇವೆ ಎಂದು ಹೇಳಿದರು.

ಎಲ್ಲ ಸಚಿವರು ಮೈತ್ರಿ ಸರಕಾರದ ಸ್ಥಿರತೆ ಹಾಗೂ ಸುಭದ್ರ ಸರಕಾರ ನೀಡಲು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದು, ಎಲ್ಲರೂ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದ ಅವರು, ಸಚಿವರು ಅವರವರ ಜಿಲ್ಲೆಗಳಲ್ಲಿ ಸಮರ್ಥವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ ಎಂದರು.

ಆಪರೇಷನ್ ಕಮಲದ ಆತಂಕ ನಮಗಿಲ್ಲ. ಯಾವುದೇ ಶಾಸಕರು ಪಕ್ಷವನ್ನು ತೊರೆಯುವುದಿಲ್ಲ. ಶಾಸಕರಾದ ರಮೇಶ್ ಜಾರಕಿಹೊಳಿ, ರೋಷನ್ ಬೇಗ್ ಹೊರತುಪಡಿಸಿ ಉಳಿದೆಲ್ಲ ಶಾಸಕರು ಮೈತ್ರಿ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಕುತಂತ್ರ ನಡೆಯುವುದಿಲ್ಲ ಎಂದು ಹೇಳಿದರು.

‘ಬಿಜೆಪಿ ನಾಯಕರಿಗೆ ಯಾವುದೇ ನೈತಿಕತೆ ಇಲ್ಲ. ನೈತಿಕತೆ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧರಿಸುತ್ತೇವೆ. ಶಾಸಕ ರಮೇಶ್ ಜಾರಕಿಹೊಳಿ ಸೇರಿ ಯಾರೂ ಪಕ್ಷ ಬಿಡುವುದಿಲ್ಲ’

-ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News