×
Ad

ಜಿಂದಾಲ್ ಸಂಸ್ಥೆಯಿಂದ ಸರಕಾರಕ್ಕೆ ಯಾವುದೇ ಬಾಕಿ ಬರಬೇಕಿಲ್ಲ: ಕೆ.ಜೆ.ಜಾರ್ಜ್

Update: 2019-05-30 21:44 IST

ಬೆಂಗಳೂರು, ಮೇ 30: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾಡಿರುವ ಆರೋಪದಂತೆ ಜಿಂದಾಲ್ ಸಂಸ್ಥೆಯಿಂದ ರಾಜ್ಯ ಸರಕಾರಕ್ಕೆ ಯಾವುದೇ ಬಾಕಿ ಬರಬೇಕಿಲ್ಲ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಿದರು.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಸಚಿವ ಸಂಪುಟ ಸಭೆಯಲ್ಲಿ ಜೆಎಸ್‌ಡಬ್ಲು ಸ್ಟೀಲ್ ಲಿಮಿಟೆಡ್(ಜಿಂದಾಲ್)ಸಂಸ್ಥೆಯ ಪರವಾಗಿ 1666.73 ಎಕರೆ ಭೂಮಿಯನ್ನು ಮಾರಾಟ ಮಾಡಿಕೊಡಲು(ಲೀಸ್ ಕಂ ಸೇಲ್) ಕೈಗೊಂಡ ತೀರ್ಮಾದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ ಎಂದರು.

1971ರಲ್ಲಿ ಏಳು ಸಾವಿರ ಎಕರೆಯನ್ನು ವಿಜಯನಗರ ಸ್ಟೀಲ್ ಪ್ಲಾಂಟ್‌ಗಾಗಿ ಕೇಂದ್ರ ಸರಕಾರ ಸ್ವಾಧೀನಪಡಿಸಿಕೊಂಡಿತ್ತು. 1995ರ ವರೆಗೆ ಈ ಸಂಬಂಧ ಯಾವುದೇ ಪ್ರಗತಿಯಾಗಿಲ್ಲ. ಅದಕ್ಕಿಂತ ಮುಂಚೆ ಕೇಂದ್ರ ಸರಕಾರ ಈ ಭೂಮಿಯನ್ನು ರಾಜ್ಯ ಸರಕಾರಕ್ಕೆ ವಾಪಸ್ಸು ನೀಡಿ, ಆರು ವರ್ಷಗಳ ಒಳಗೆ ಸ್ಟೀಲ್ ಪ್ಲಾಂಟ್ ಮಾಡುವಂತೆ ಶರತ್ತು ವಿಧಿಸಿತ್ತು ಎಂದು ಅವರು ಹೇಳಿದರು.

1995ರಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ವಿಜಯನಗರ ಸ್ಟೀಲ್ ಪ್ಲಾಂಟ್‌ಗೆ 3 ಸಾವಿರ ಎಕರೆ ಭೂಮಿಯನ್ನು ನೀಡಲು ನಿರ್ಧರಿಸಿದರು. ಆನಂತರ, ಸರಕಾರವು 1996ರಲ್ಲಿ ಈ ಸಂಸ್ಥೆಗೆ ಕಚ್ಚಾ ಸಾಮಗ್ರಿ ಪೂರೈಸಲು ಮೈಸೂರು ಮಿನರಲ್ಸ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

2005ರಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂಪುಟ ಸಭೆಯಲ್ಲಿ 2 ಸಾವಿರ ಎಕರೆ ಭೂಮಿಯನ್ನು ಸ್ಟೀಲ್ ಪ್ಲಾಂಟ್ ವಿಸ್ತರಣೆ ಮಾಡಲು ಪ್ರತಿ ಎಕರೆಗೆ 90 ಸಾವಿರ ರೂ.ದರ ನಿಗದಿಪಡಿಸಿ ಲೀಸ್ ಕಂ ಸೇಲ್ ಮಾಡಲು ನಿರ್ಧರಿಸಲಾಗಿತ್ತು. 2006ರಲ್ಲಿ ಈ ಸಂಬಂಧ ಸರಕಾರಿ ಆದೇಶ ಹೊರಡಿಸುವಾಗ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಬಿ.ಎಸ್.ಯಡಿಯೂರಪ್ಪ ಕೈಗಾರಿಕಾ ಸಚಿವರಾಗಿದ್ದರು ಎಂದು ಅವರು ಹೇಳಿದರು.

2007ರಲ್ಲಿ 1600 ಎಕರೆ ಭೂಮಿಯನ್ನು ವಿಜಯನಗರ ಸ್ಟೀಲ್ ನವರಿಗೆ ಪ್ರತಿ ಎಕರೆಗೆ 1.22 ಲಕ್ಷ ರೂ.ದರ ನಿಗದಿ ಮಾಡಿ, 10 ವರ್ಷಕ್ಕೆ ಲೀಸ್‌ಗೆ ನೀಡಲಾಗಿತ್ತು. ಆ ಭೋಗ್ಯದ ಅವಧಿ 2017ರಲ್ಲಿ ಅಂತ್ಯಗೊಂಡಿದೆ. ಈಗ ಜಿಂದಾಲ್ ಸಂಸ್ಥೆಗೆ ಲೀಸ್ ಕಂ ಸೇಲ್‌ಗೆ ನಾವು ಹಾಕಿರುವ ಶರತ್ತುಗಳನ್ನು ಪೂರೈಸಿದ ಬಳಿಕ ಭೂಮಿ ಹಂಚಿಕೆ ತೀರ್ಮಾನ ಮಾಡಲಾಗಿದೆ ಎಂದು ಜಾರ್ಜ್ ತಿಳಿಸಿದರು.

ರಾಜಧನ ನೀಡುವ ವಿಚಾರದಲ್ಲಿ ಜಿಂದಾಲ್ ಹಾಗೂ ಮೈಸೂರು ಮಿನರಲ್ಸ್ ನಡುವೆ ವ್ಯಾಜ್ಯ ಉಂಟಾಗಿತ್ತು. ಮೈಸೂರು ಮಿನಲರ್ಸ್‌ನವರು 270 ಕೋಟಿ ರೂ.ನಮಗೆ ನೀಡಬೇಕು ಎಂದು ಜಿಂದಾಲ್ ನ್ಯಾಯಾಲಯಕ್ಕೆ ಹೋಗಿದೆ. ಇದೇ ಪ್ರಕರಣದಲ್ಲಿ ಮೈಸುರು ಮಿನರಲ್ಸ್‌ನವರು ಜಿಂದಾಲ್ ಸಂಸ್ಥೆಯಿಂದ ನಮಗೆ 1300 ಕೋಟಿ ರೂ.ಬರಬೇಕಿದೆ ಎಂದು ಪ್ರತಿವಾದ ಮಂಡಿಸಿದೆ. ಈ ಪ್ರಕರಣ ಇನ್ನು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಅವರು ಹೇಳಿದರು.

2005ರಲ್ಲಿ ಪ್ರತಿ ಎಕರೆ ಭೂಮಿಗೆ ನಿಗದಿಪಡಿಸಿದ್ದ 90 ಸಾವಿರ ರೂ.ದರವನ್ನು 1.22 ಲಕ್ಷ ರೂ.ಗಳಿಗೆ ಹಾಗೂ 2007ರಲ್ಲಿ ನಿಗದಿಪಡಿಸಿದ್ದ 1.22 ಲಕ್ಷ ರೂ.ದರವನ್ನು 1.50 ಲಕ್ಷ ರೂ.ಗಳಿಗೆ ನಾವು ಹೆಚ್ಚಳ ಮಾಡಿದ್ದೇವೆ ಎಂದು ಜಾರ್ಜ್ ತಿಳಿಸಿದರು.

ಜಿಂದಾಲ್ ಸಂಸ್ಥೆಯು ದೇಶದ ಪ್ರತಿಷ್ಠಿತ ಸ್ಟೀಲ್ ಸಂಸ್ಥೆಯಾಗಿದೆ. ಈಗಾಗಲೇ ಅನೇಕ ಸಂಸ್ಥೆಗಳು ಮುಚ್ಚಿಹೋಗಿವೆ. ಆದರೆ, ಜಿಂದಾಲ್ ಉಕ್ಕನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಸುಮಾರು 25 ಸಾವಿರ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 25 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಅಲ್ಲದೇ, ಸರಕಾರಕ್ಕೆ ಪ್ರತಿ ವರ್ಷ ಸುಮಾರು 2 ಸಾವಿರ ಕೋಟಿ ರೂ.ತೆರಿಗೆ ಕಟ್ಟುತ್ತಿದ್ದಾರೆ ಎಂದು ಅವರು ಹೇಳಿದರು.

ಎಚ್.ಕೆ.ಪಾಟೀಲ್ ಉದ್ದೇಶಪೂರ್ವಕವಾಗಿ ಈ ರೀತಿ ಮುಖ್ಯಮಂತ್ರಿಗೆ ಪತ್ರ ಬರೆದಿರಲು ಸಾಧ್ಯವಿಲ್ಲ. ಅವರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ. ಅವರಿಗೆ ಈ ಸಂಬಂಧ ಅಗತ್ಯವಿರುವ ಮಾಹಿತಿಯನ್ನು ತಾನು ಕಳುಹಿಸಿಕೊಡಲು ಬದ್ಧನಾಗಿದ್ದೇನೆ ಎಂದು ಜಾರ್ಜ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಉಪಸ್ಥಿತರಿದ್ದರು.

ಹೈಕಮಾಂಡ್ ತೀರ್ಮಾನಕ್ಕೆ ಬದ್ಧ

ನಾವು ಪಕ್ಷದ ಶಿಸ್ತಿನ ಸಿಪಾಯಿಗಳು, ನಮಗೆ ಸಚಿವ ಸ್ಥಾನ ನೀಡುವುದು ಹಾಗೂ ಹಿಂಪಡೆಯುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದು. ಈಗಾಗಲೇ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಸಂಬಂಧ ಶಾಸಕಾಂಗ ಪಕ್ಷದ ನಾಯಕರು ಸ್ಪಷ್ಟಣೆ ನೀಡಿದ್ದಾರೆ. ಅದನ್ನು ಮೀರಿ ನಾವು ಯಾವುದೇ ಹೇಳಿಕೆ ನೀಡಲ್ಲ. ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ.

-ಕೆ.ಜೆ.ಜಾರ್ಜ್, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News