ಮೈತ್ರಿ ಸರಕಾರ ಬೀಳಿಸುವುದರಲ್ಲೇ ಬಿಜೆಪಿ ಮಗ್ನ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-05-30 16:19 GMT

ಬೆಂಗಳೂರು, ಮೇ 30: ‘ಮೈತ್ರಿ ಸರಕಾರ ರಚನೆ ಆದ ದಿನದಿಂದ ಇಂದಿನವರೆಗೂ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡದೆ ಕೇವಲ ಸರಕಾರ ಬೀಳಿಸುವುದರಲ್ಲೇ ಮಗ್ನವಾಗಿದೆ’ ಎಂದು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಕಾಂಗ್ರೆಸ್ ಶಾಸಕರು ನಮ್ಮ ಜೊತೆಯಿದ್ದಾರೆ, ಕೆಲವು ಜೆಡಿಎಸ್ ಶಾಸಕರು ಬಿಜೆಪಿ ಸೇರುತ್ತಾರೆ. ನಾಳೆ ಸರಕಾರ ಬೀಳಲಿದೆ, ತಿಂಗಳ ಅಂತ್ಯಕ್ಕೆ ಮೈತ್ರಿ ಸರಕಾರ ಬೀಳಲಿದೆ ಎಂದು ಬಿಜೆಪಿಯವರು ಹೇಳುತ್ತಲೇ ಬಂದಿದ್ದಾರೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯಿಂದ ಜನಾದೇಶ ತಿರಸ್ಕಾರ: ‘ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಜನತೆ ನೀಡಿದ ತೀರ್ಪನ್ನು ನಾವು ತಲೆಬಾಗಿ ಒಪ್ಪಿಕೊಂಡಿದ್ದೇವೆ. ಆದರೆ, ರಾಜ್ಯ ಬಿಜೆಪಿ ನಾಯಕರು ತಮಗೆ ಬಹುಮತವಿಲ್ಲದಿದ್ದರೂ ಮೈತ್ರಿ ಸರಕಾರವನ್ನು ಬೀಳಿಸಿ, ಅಧಿಕಾರದ ಗದ್ದುಗೆ ಏರುವ ಪ್ರಯತ್ನವನ್ನು ಮಾತ್ರ ಇಂದಿಗೂ ಕೈಬಿಟ್ಟಿಲ್ಲ. ಇದು ನಾಡಿನ ಜನಾದೇಶ ತಿರಸ್ಕರಿಸಿದಂತಲ್ಲವೇ?’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಪ್ರಶ್ನಿಸಿದ್ದಾರೆ.

ಸರಕಾರಕ್ಕೆ ಅಪಾಯವಿಲ್ಲ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಕ್ಕೆ ಯಾವುದೇ ಅಪಾಯವಿಲ್ಲ. ಸದ್ಯಕ್ಕೆ ಸಂಪುಟ ಪುನಾರಚನೆಯ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರ ಸಭೆ ಬಳಿಕ ಸ್ಪಷ್ಟನೆ ನೀಡಿದರು.

ಕಾಂಗ್ರೆಸ್‌ನಲ್ಲಿ ಅತೃಪ್ತರನ್ನು ಸಮಾಧಾನಪಡಿಸಲು ಮುಂದಿನ ಎರಡು ವಾರಗಳೊಳಗೆ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ಮಾಡಲಾಗುವುದು ಎಂಬ ವದಂತಿಗಳಿಗೆ ಅವರು ಇದೆ ವೇಳೆ ತೆರೆ ಎಳೆದಿದ್ದಾರೆ. ಬಿಜೆಪಿ ಮೈತ್ರಿ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಲೇ ಇದೆ. ಅದು ಯಶಸ್ವಿಯಾಗುವುದಿಲ್ಲ. ಸರಕಾರಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅಭಯ ನೀಡಿದರು.

ಲೋಕಸಭೆ ಚುನಾವಣೆ ಫಲಿತಾಂಶ ಕೇಂದ್ರ ಸರಕಾರಕ್ಕೆ ಸಂಬಂಧಿಸಿದ್ದು. ರಾಜ್ಯ ಸರಕಾರಕ್ಕೂ ಅದಕ್ಕೂ ಸಂಬಂಧವಿಲ್ಲ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಮುಂದುವರಿಯುತ್ತದೆ. ಬಿಜೆಪಿಯವರಿಗೆ ವಿಧಾನಸಭೆ ವಿಸರ್ಜಿಸಿ ಎಂದು ಕೇಳುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News