ವೈದ್ಯರಿಗೆ ಶೀಘ್ರ ಪ್ರೋತ್ಸಾಹ ಧನ ಜಾರಿ: ಎಚ್.ಡಿ.ಕುಮಾರಸ್ವಾಮಿ

Update: 2019-05-30 17:30 GMT

ಬೆಂಗಳೂರು, ಮೇ 30: ಪ್ರಾಮಾಣಿಕ ಸೇವೆ ಗುರುತಿಸಿ ರಾಜ್ಯ ವ್ಯಾಪ್ತಿಯ ಸರಕಾರಿ ಆಸ್ಪತ್ರೆ ವೈದ್ಯರಿಗೆ ಶೀಘ್ರದಲ್ಲಿಯೇ ಪ್ರೋತ್ಸಾಹ ಧನ(ಇನ್ಸೆಂಟಿವ್) ಜಾರಿಗೊಳಿಸಲಾಗುವುದೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.

ಇಲ್ಲಿನ ಜಯನಗರದ ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಆಸ್ಪತ್ರೆಯಲ್ಲಿ ಹೊಸದಾಗಿ ನಿರ್ಮಿಸಿರುವ ಎಂಆರ್‌ಐ ಹಾಗೂ ಮಾಡ್ಯುಲರ್ ಶಸ್ತ್ರಚಿಕಿತ್ಸೆ ವಿಭಾಗ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈದ್ಯರಿಗೆ ಪ್ರೋತ್ಸಾಹ ಧನ ನೀಡಬೇಕೆಂದು ಆರೋಗ್ಯ ಸಚಿವರು ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಜಾರಿಗೊಳಿಸಲು ಬದ್ಧ ಎಂದರು.

ಬ್ರಿಟಿಷರ ಕಾಲದ ವಿಕ್ಟೋರಿಯಾ, ಬೌರಿಂಗ್, ಮಲ್ಲೇಶ್ವರಂ ಕೆಸಿ ಜನರಲ್ ಸಾರ್ವಜನಿಕ ಆಸ್ಪತ್ರೆ ಬಿಟ್ಟರೆ, ಬೆಂಗಳೂರಿನಲ್ಲಿ ಎಲ್ಲಿಯೂ ಸೂಕ್ತ ಸರಕಾರಿ ಆಸ್ಪತ್ರೆ ಇಲ್ಲ. ಅಲ್ಲದೆ, ಬೆಂಗಳೂರು ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ಅಪಘಾತಗಳು ಸಂಭವಿಸಿದಾಗ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸಮೀಪದಲ್ಲಿ ಆಸ್ಪತ್ರೆ ಇಲ್ಲದಿರುವುದು. ಹೀಗಾಗಿ, ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಸುಮಾರು 150 ಕೋಟಿ ವೆಚ್ಚದಲ್ಲಿ 4 ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಿಸಲು ಸರಕಾರ ಮುಂದಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಸರಿಸಮನಾಗಿ ಸರಕಾರಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ, ಜಯದೇವ, ಸಂಜಯಗಾಂಧಿ ಸೇರಿದಂತೆ ರಾಜ್ಯದ ಅನೇಕ ಆಸ್ಪತ್ರೆಗಳು, ಜನರಿಗೆ ಉತ್ತಮ ಸೇವೆ ಸಲ್ಲಿಸಿ, ಹೆಸರು ಗಳಿಸಿವೆ ಎಂದ ಅವರು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಉದ್ದೇಶಪೂರ್ವಕವಾಗಿ ಜನರನ್ನು ದಿಕ್ಕು ತಪ್ಪಿಸಿ ಹಣ ವಸೂಲಿ ಮಾಡುವ ದಂಧೆ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕರು ಎಚ್ಚರ ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ್, ಶಾಸಕ ಉದಯ್ ಗರುಡಾಚಾರ್, ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಸಂಜಯ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ಚಂದ್ರಶೇಖರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News