ಜೆಡಿಎಸ್ ಮುಖಂಡರ ಅವಹೇಳನ: ಟ್ರೋಲ್ ಮಗಾ ಫೇಸ್‌ಬುಕ್ ಪೇಜ್ ಆಡ್ಮಿನ್‌ಗಾಗಿ ಶೋಧ

Update: 2019-05-30 17:33 GMT

ಬೆಂಗಳೂರು, ಮೇ 30: ಜೆಡಿಎಸ್ ಪಕ್ಷದ ಮುಖಂಡರನ್ನು ಗುರಿಯಾಗಿಸಿಕೊಂಡು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದಡಿ ಟ್ರೋಲ್ ಮಗಾ ಫೇಸ್‌ಬುಕ್ ಪುಟದ ಅಡ್ಮಿನ್ ವಿರುದ್ಧ ಇಲ್ಲಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಶೋಧ ನಡೆಸಲಾಗುತ್ತಿದೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಪೋಸ್ಟ್‌ಗಳನ್ನು ಟ್ರೋಲ್ ಮಗಾ ಪುಟದಲ್ಲಿ ಪ್ರಕಟಿಸಿ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಪ್ರದೀಪ್‌ಕುಮಾರ್ ದೂರು ಸಲ್ಲಿಸಿದ್ದರು.

ದೂರಿನಲ್ಲಿ ಜಯಕಾಂತ್ ಎಂಬಾತ ಈ ಟ್ರೋಲ್ ಮಗಾ ಪುಟದ ಅಡ್ಮಿನ್ ಎಂಬುದಾಗಿ ಉಲ್ಲೇಖ ಮಾಡಲಾಗಿತ್ತು. ಇದರ ಅನ್ವಯ ಪೊಲೀಸರು ಜಯಕಾಂತ್ ಅವರನ್ನು ವಿಚಾರಣೆಗೊಳಪಡಿಸಿದಾಗ, ಅಡ್ಮಿನ್ ಅಲ್ಲವೆಂಬುದು ತಿಳಿದುಬಂದಿದೆ.

ಪುಟದ ಅಡ್ಮಿನ್ ಯಾರು ಎಂಬುದು ಗೊತ್ತಾಗಿಲ್ಲ. ಆತನಿಗಾಗಿ ಹುಡುಕಾಟ ನಡೆಸುತ್ತಿದ್ದು, ಸೈಬರ್ ಕ್ರೈಂ ಪೊಲೀಸರ ನೆರವು ಪಡೆಯುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News