ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ: ಪ್ರತಿಭಟನೆ
ಬೆಂಗಳೂರು, ಮೇ 30: ನಗರದ ಮಹದೇವಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ ಮಾಡಿದ್ದಾರೆಂದು ಖಂಡಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಿಪಬ್ಲಿಕ್ ಸೇನೆ ಕಾರ್ಯಕರ್ತರು ವರ್ತೂರಿನಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಸೋರಹುಣಸೆ ವೆಂಕಟೇಶ್ ಮಾತನಾಡಿ, ವರ್ತೂರು ವ್ಯಾಪ್ತಿಯಲ್ಲಿ ದಿನನಿತ್ಯ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಲಿತರ ಪರ ಧ್ವನಿ ಎತ್ತುವವರ ವಿರುದ್ಧವೂ ಹಲ್ಲೆಗಳು ನಡೆಯುತ್ತಿವೆ. ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಪೊಲೀಸರಾಗಲಿ ಗಮನ ವಹಿಸುತ್ತಿಲ್ಲವೆಂದು ಅರೋಪಿಸಿದರು.
ಮುಳ್ಳೂರು ಗ್ರಾಮದ ದಲಿತರ ಕುಟುಂಬಕ್ಕೆ ಸೇರಿದ ಜಾಗದಲ್ಲಿ ನಿರ್ಮಾಣಗೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕವನ್ನು ಕೆಲ ದುಷ್ಕರ್ಮಿಗಳು ಕೆತ್ತೆಸೆದು ಅವಮಾನ ಮಾಡಿದ್ದಾರೆ. ಇದರಲ್ಲಿ ಭಾಗಿಗಳಾದ ಪ್ರತಿಯೊಬ್ಬ ಆರೋಪಿಗಳ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ವೇಳೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮುಳ್ಳೂರು ಶ್ರೀನಿವಾಸ್, ಕಾರ್ಯದರ್ಶಿ ಕಿರಣ್‌ಕುಮಾರಿ ಮತ್ತಿತರರಿದ್ದರು.