ಆಟೊ ಚಾಲಕನ ಹತ್ಯೆ
Update: 2019-05-30 23:12 IST
ಬೆಂಗಳೂರು, ಮೇ 30: ಆಟೊ ಚಾಲಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿರುವ ಘಟನೆ ಇಲ್ಲಿನ ಕಾಡುಗೊಂಡನ(ಕೆಜಿ)ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕೆಜಿಹಳ್ಳಿಯ ಇದಾಯತ್ ನಗರದ ಸ್ಟೀಫನ್ ಯಾನೆ ರಾಜಾ (29) ಮೃತ ಆಟೊ ಚಾಲಕ ಎಂದು ಪೊಲೀಸರು ಗುರುತಿಸಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸ್ಟೀಫನ್, ವರ್ಷದ ಹಿಂದೆ ತಮಿಳುನಾಡಿಗೆ ಹೋಗಿ ನೆಲೆಸಿದ್ದ. ನಂತರ ವಾಪಸ್ಸಾಗಿ ನಗರದಲ್ಲಿ ಆಟೊ ಚಲಾಯಿಸಿಕೊಂಡು ಜೀವನ ನಡೆಸುತ್ತಿದ್ದ. ಬುಧವಾರ ರಾತ್ರಿ ಸ್ಟೀಫನ್‌ನನ್ನು ಕರೆದುಕೊಂಡು ಹೋಗಿರುವ ಇಬ್ಬರು ಸ್ನೇಹಿತರು, ಜತೆಯಲ್ಲಿ ಮದ್ಯಪಾನ ಮಾಡಿ ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಸ್ಟೀಫನ್‌ನ್ನು ಕೊಲೆ ಮಾಡಿ ಆಟೊದಲ್ಲಿಯೇ ಮೃತದೇಹವನ್ನು ಬಿಟ್ಟು ಹೋಗಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಕೆಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.