×
Ad

ಬಿಬಿಎಂಪಿ ಕೌನ್ಸಿಲ್ ಸಭೆ: ಟೆಂಡರ್ ಪ್ರಕ್ರಿಯೆ ಬದಲಿಸಲು ಸಾಧ್ಯವಿಲ್ಲ- ಮಂಜುನಾಥ್ ಪ್ರಸಾದ್

Update: 2019-05-30 23:44 IST

ಬೆಂಗಳೂರು, ಮೇ 30: ಹಸಿ, ಒಣ ಹಾಗೂ ಸಗಟು ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಹೀಗಾಗಿ, ಟೆಂಡರ್ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಗುರುವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ, ಹಸಿ, ಒಣ ಹಾಗೂ ಸಗಟು ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಇದೀಗ ಒಂದೇ ಟೆಂಡರ್ ಕರೆಯಬೇಕೆಂದರೆ ಮತ್ತೆ ಟೆಂಡರ್‌ನ್ನು ಮಾರ್ಪಾಡು ಮಾಡಿ ಹೊಸದಾಗಿ ಟೆಂಡರ್ ಕರೆಯಬೇಕಾದರೆ ಒಂದು ವರ್ಷವಾದರೂ ಬೇಕಾಗುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ಒಂದೇ ಟೆಂಡರ್ ಟೆಂಡರ್ ಕರೆಯಲು ಸಾಧ್ಯವಾಗುವುದಿಲ್ಲ ಎಂದರು.

ಇದಕ್ಕೂ ಮೊದಲು ಪಾಲಿಕೆಯ ಸದಸ್ಯರು ತ್ಯಾಜ್ಯ ವಿಲೇವಾರಿಗಾಗಿ ಹೊಸದಾಗಿ ಕರೆದಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಕೆಲ ಮಾರ್ಪಾಡುಗಳು ಮಾಡಬೇಕು. ಒಣ, ಹಸಿ ಹಾಗೂ ಸಗಟು ತ್ಯಾಜ್ಯಕ್ಕೆ ಕರೆದಿರುವ ಟೆಂಡರ್‌ನ್ನು ಬೇರೆ ಬೇರೆ ನೀಡದೆ ಒಂದೇ ಟೆಂಡರ್ ಕರೆಯಬೇಕು ಸೇರಿದಂತೆ ಕೆಲ ಶರತ್ತುಗಳನ್ನು ಸಡಿಲಗೊಳಿಸಬೇಕೆಂದು ಆಗ್ರಹಿಸಿದರು.

ನಗರದಲ್ಲಿ ಮನೆ ಮನೆಗಳಿಂದ ಸಂಗ್ರಹಿಸುವ ತ್ಯಾಜ್ಯ ಪ್ರತಿನಿತ್ಯ 4,200 ಟನ್ ಉತ್ಪತ್ತಿ ಆಗುತ್ತಿದ್ದು, ಅದನ್ನು ಆಟೋಟಿಪ್ಪರ್, ಕಾಂಪ್ಯಾಕ್ಟರ್‌ಗಳ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಕಸ ವಿಲೇವಾರಿಗಾಗಿ ವಾರ್ಷಿಕ ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಇನ್ನು ಸಗಟು ತ್ಯಾಜ್ಯ ಪ್ರತಿನಿತ್ಯ 1,500 ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದ್ದು, ಅದಕ್ಕೆ ಬಿಬಿಎಂಪಿಯಿಂದ ಒಂದು ಪೈಸೆ ಕೂಡಾ ವ್ಯಯಿಸುತ್ತಿಲ್ಲ. ಅದಕ್ಕಾಗಿಯೇ ಪ್ರತ್ಯೇಕ 20 ಗುತ್ತಿಗೆದಾರರಿದ್ದು, ಉತ್ಪತ್ತಿ ಆಗುವ ಸಗಟು ತ್ಯಾಜ್ಯಕ್ಕೆ ಅವರೇ ದರ ನಿಗದಿಪಡಿಸಿ ವಿಲೇವಾರಿ ಮಾಡುತ್ತಿದ್ದಾರೆ ಎಂದರು.

ಹಸಿ, ಒಣ ಮತ್ತು ಸಗಟು ತ್ಯಾಜ್ಯ ಸಂಗ್ರಹ, ವಿಲೇವಾರಿಗೆ ಪ್ರತ್ಯೇಕ ಗುತ್ತಿಗೆದಾರರ ನೇಮಕ ವಿಚಾರದಲ್ಲಿ ಬಿಬಿಎಂಪಿ ಸದಸ್ಯರ ಇಬ್ಬಗೆ ಧೋರಣೆಯಿಂದಾಗಿ, ತ್ಯಾಜ್ಯ ನಿರ್ವಹಣೆ ಗುತ್ತಿಗೆ ನೀಡುವ ವಿಚಾರ ಡೋಲಾಯಮಾನವಾಗುವಂತಾಗಿದೆ. ಹಸಿ, ಒಣ ಮತ್ತು ಸಗಟು ತ್ಯಾಜ್ಯ ಸಂಗ್ರಹ, ವಿಲೇವಾರಿ ಹೊಣೆಯನ್ನು ಒಬ್ಬರಿಗೆ ವಹಿಸುವ ಬದಲು ಬೇರೆ ಬೇರೆ ಗುತ್ತಿಗೆದಾರರನ್ನು ನೇಮಿಸುವಂತೆ ಬಿಬಿಎಂಪಿ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಿದ್ದರು.

ಆದರೆ, ಗುರುವಾರ ನಡೆದ ಕೌನ್ಸಿಲ್ ಸಭೆಯಲ್ಲಿ ತಮ್ಮದೇ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಸದಸ್ಯರು, ಪ್ರತ್ಯೇಕ ಗುತ್ತಿಗೆದಾರರ ಬದಲು ಒಬ್ಬರಿಗೇ ಎಲ್ಲ ತ್ಯಾಜ್ಯ ನಿರ್ವಹಣೆಯ ಹೊಣೆ ನೀಡುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಮೇಯರ್ ಅಧ್ಯಕ್ಷತೆಯಲ್ಲಿ ನೇಮಿಸಲಾಗಿರುವ ಸಮಿತಿಯಲ್ಲಿ ಆ ಕುರಿತು ಮತ್ತೊಮ್ಮೆ ಚರ್ಚೆ ನಡೆಸಲು ಕೌನ್ಸಿಲ್‌ನಲ್ಲಿ ನಿರ್ಧರಿಸಲಾಯಿತು.

ಹೈಕೋರ್ಟ್ ಆದೇಶವಿದೆ ಸಾಧ್ಯವಿಲ್ಲ: ತ್ಯಾಜ್ಯ ಗುತ್ತಿಗೆ ನೀಡುವ ಸಂಬಂಧ ಈಗಾಗಲೆ ಬಿಡ್ ತೆರೆಯಲಾಗಿದ್ದು, ಅದರ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಗುತ್ತಿಗೆ ನಿಯಮಗಳ ಬಗ್ಗೆ ಕೌನ್ಸಿಲ್‌ನಲ್ಲಿ ಸದಸ್ಯರು ಅಪಸ್ವರ ಎತ್ತಿದ್ದಾರೆ. ಅದಕ್ಕೆ ಉತ್ತರಿಸಿದ ಆಯುಕ್ತ ಮಂಜುನಾಥಪ್ರಸಾದ್, ಹಸಿ, ಒಣ ಮತ್ತು ಸಗಟು ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನಿರ್ವಹಿಸಬೇಕೆಂದು ಹೈಕೋರ್ಟ್ ಆದೇಶವಿದೆ. ಅದರ ಆಧಾರದಲ್ಲಿ ಗುತ್ತಿಗೆ ಪ್ರಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News