ಮೋದಿ ಪ್ರಮಾಣ: ಯುಎಇ ಎಡ್‌ನಾಕ್ ಕಟ್ಟಡಕ್ಕೆ ದೀಪಾಲಂಕಾರ

Update: 2019-05-31 04:06 GMT

ಅಬುಧಾಬಿ, ಮೇ 31: ಎರಡನೇ ಅವಧಿಗೆ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಸ್ನೇಹ ಸಂಬಂಧದ ಸಂಕೇತವಾಗಿ, ಇಲ್ಲಿನ ಆಕರ್ಷಕ ಎಡ್‌ನಾಕ್ ಕಟ್ಟಡಕ್ಕೆ ಆಕರ್ಷಕ ದೀಪಾಲಂಕಾರ ಮಾಡಲಾಗಿತ್ತು.

ಭಾರತ ಹಾಗೂ ಯುಎಇ ದೇಶಗಳ ಧ್ವಜ ಹಾಗೂ ನರೇಂದ್ರ ಮೋದಿ ಮತ್ತು ಅಬುಧಾಬಿ ರಾಜ ಶೇಖ್ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರ ಬೃಹತ್ ಭಾವಚಿತ್ರಗಳು ಕೂಡಾ ಗುರುವಾರ ಬೃಹತ್ ಕಟ್ಟಡದಲ್ಲಿ ಕಂಗೊಳಿಸುತ್ತಿತ್ತು. ಅಬುದಾಭಿ ನ್ಯಾಷನಲ್ ಆಯಿಲ್ ಕಂಪೆನಿ ಅಥವಾ ಅಡ್‌ನಾಕ್, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಏಕೈಕ ಸರ್ಕಾರಿ ಸ್ವಾಮ್ಯದ ತೈಲಸಂಸ್ಥೆಯಾಗಿದೆ.

ಭಾರತದ ಇಂಧನ ಭದ್ರತೆ ಯುಎಇ ದೇಶದ ಪ್ರಮುಖ ಆದ್ಯತೆಯಾಗಿದ್ದು, ಭಾರತದ ಪ್ರಮುಖ ಪೆಟ್ರೋಲಿಯಂ ನಿಕ್ಷೇಪ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಏಕೈಕ ವಿದೇಶಿ ತೈಲ ಮತ್ತು ಅನಿಲ ಕಂಪೆನಿ ಇದಾಗಿದೆ. ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಿರ್ಮಿಸಲಾಗುತ್ತಿರುವ ಭಾರತದ ಅತಿದೊಡ್ಡ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಸಂಕೀರ್ಣದಲ್ಲಿ ಷೇರುಗಳನ್ನು ಕೂಡಾ ಅಡ್‌ನಾಕ್ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News