×
Ad

ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತ್ಯಧಿಕ: ಕೊನೆಗೂ ಒಪ್ಪಿಕೊಂಡ ಸರಕಾರ

Update: 2019-05-31 18:47 IST

ಹೊಸದಿಲ್ಲಿ, ಮೇ.31: 2017-18ರಲ್ಲಿ ಭಾರತದ ನಿರುದ್ಯೋಗ ದರ ಶೇ.6.1 ಆಗಿದೆ ಎಂದು ಸಂಖ್ಯಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಆಮೂಲಕ ಜನವರಿಯಲ್ಲಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದ ಅಂಕಿಅಂಶಗಳನ್ನು ಸರಕಾರ ದೃಢಪಡಿಸಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಈ ಅಂಕಿಅಂಶವನ್ನು ಬಿಡುಗಡೆಗೊಳಿಸಲಾಗಿದೆ. ನಿರುದ್ಯೋಗ ಸಮಸ್ಯೆ ಮತ್ತು ಕೃಷಿದರ ಕುಸಿತದ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಮಧ್ಯೆಯೇ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿತ್ತು. ನಿರುದ್ಯೋಗ ಪ್ರಮಾಣವನ್ನು ಹೋಲಿಕೆ ಮಾಡಲು ಸಂಖ್ಯೆಗಳನ್ನು ನೀಡಲು ಸರಕಾರ ನಿರಾಕರಿಸಿದೆ. ಸದ್ಯ ನಾವು ಹೊಸ ಸರಕಾರ ಹೊಂದಿದ್ದು ಹಳೆಯದನ್ನು ಹೋಲಿಸುವುದು ಸರಿಯಲ್ಲ ಎಂದು ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರವೀಣ್ ಶ್ರೀವಾಸ್ತವ ತಿಳಿಸಿದ್ದಾರೆ.

ಜನವರಿಯಲ್ಲಿ ಮೊದಲ ಬಾರಿ ಈ ಬಗ್ಗೆ ವರದಿ ಮಾಡಿದ ಬಿಸಿನೆಸ್ ಸ್ಟಾಂಡರ್ಡ್ಸ್ ಪತ್ರಿಕೆ, ಈ ವರದಿಯನ್ನು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ ಜುಲೈ 2017ರಿಂದ ಜೂನ್ 2018ರವರೆಗೆ ನಡೆಸಿದ ಸಮೀಕ್ಷೆಯ ಆಧರಿಸಿದೆ ಎಂದು ತಿಳಿಸಿತ್ತು. 1972-73ರಿಂದೀಚೆಗೆ ಇದೇ ಮೊದಲ ಬಾರಿ ನಿರುದ್ಯೋಗ ದರ ಅತ್ಯಂತ ಗರಿಷ್ಠ ಏರಿಕೆ ಕಂಡಿದೆ ಎಂದು ಆ ಆರ್ಥಿಕ ವರ್ಷದ ಅಂಕಿಅಂಶವನ್ನು ನೀಡದೆ ಪತ್ರಿಕೆ ವರದಿ ಮಾಡಿತ್ತು. ನಗರ ಪ್ರದೇಶಗಳಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ 2018ರ ಡಿಸೆಂಬರ್‌ಗೆ ಅಂತ್ಯವಾಗುವ ತ್ರೈಮಾಸಿಕದಲ್ಲಿ ಶೇ.19.5 ಆಗಿದೆ. ಇದೇ ವೇಳೆ ಪುರುಷರ ಪ್ರಮಾಣ ಶೇ.73.6 ಆಗಿದೆ ಎಂದು ಸಚಿವಾಲಯ ತಿಳಿಸಿದೆ.

ಆರ್ಥಿಕ ಬೆಳವಣೆಗೆ ಕುಸಿತ

 ಮಾರ್ಚ್ ತಿಂಗಳಿಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.5.8ಕ್ಕೆ ಕುಸಿದಿದ್ದು ಚೀನಾಕ್ಕಿಂತ ಹಿನ್ನಡೆ ಸಾಧಿಸಿದೆ. ಈ ಕುಸಿತದ ಫಲವಾಗಿ ಜೂನ್‌ನಲ್ಲಿ ನಡೆಯಲಿರುವ ನೀತಿ ಪರಿಶೀಲನೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಬಡ್ಡಿದರ ಕಡಿತ ಘೋಷಿಸುವ ಸಾಧ್ಯತೆಯಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಿಸಿದ್ದಾರೆ. ಬೆಳವಣಿಗೆ ಕುಂಠಿತಗೊಂಡಿರುವ ಕಾರಣ ಭಾರತ ಕಳೆದ ಒಂದೂವರೆ ವರ್ಷದಿಂದ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಬಿರುದನ್ನು ಚೀನಾಕ್ಕೆ ಬಿಟ್ಟುಕೊಡಬೇಕಾಗಿದೆ. ಮಾರ್ಚ್ ತಿಂಗಳು ಹೊರಬಿದ್ದ ತ್ರೈಮಾಸಿಕದಲ್ಲಿ ಚೀನಾ ಶೇ.6.4 ದರದಲ್ಲಿ ಬೆಳವಣಿಗೆ ಸಾಧಿಸಿದೆ ಎಂದು ತಿಳಿಸಲಾಗಿದೆ. ಆರ್‌ಬಿಐ ಎಪ್ರಿಲ್‌ನ ತನ್ನ ದ್ವೈಮಾಸಿಕ ಆರ್ಥಿಕ ನೀತಿ ಪರಿಶೀಲನೆಯಲ್ಲಿ 2019-20ರ ಜಿಡಿಪಿ ಬೆಳವಣಿಗೆಯನ್ನು ಶೇ.7.4ರಿಂದ ಶೇ.7.2ಕ್ಕೆ ಇಳಿಸಿತ್ತು. ಸಮಾನ ಸಮತೋಲನ ಹೊಂದಿರುವ ಅಪಾಯವನ್ನು ಬೆಟ್ಟು ಮಾಡಿದ್ದ ಆರ್‌ಬಿಐ, ಪ್ರಸಕ್ತ ವಿತ್ತೀಯ ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಶೇ.6.8ರಿಂದ ಶೇ.7.1ರ ದರದಲ್ಲಿ ಬೆಳವಣಿಗೆ ಸಾಧಿಸುವ ಮತ್ತು ದ್ವಿತೀಯಾರ್ಧದಲ್ಲಿ ಶೇ.7.3ರಿಂದ ಶೇ.7.4ರ ದರದಲ್ಲಿ ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News