ಬೌರಿಂಗ್ ವೈದ್ಯಕೀಯ ಕಾಲೇಜು ಆರಂಭಕ್ಕೆ ಎಂಸಿಐ ಅನುಮತಿ
ಬೆಂಗಳೂರು,ಮೇ 31: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರ ಸತತ ಪ್ರಯತ್ನದಿಂದ ಪ್ರಸಕ್ತ ಸಾಲಿನಿಂದ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಆರಂಭಿಸಲು ಭಾರತೀಯ ವೈದ್ಯಕೀಯ ಪರಿಷತ್(ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ಅನುಮತಿ ನೀಡಿದೆ.
2019-20ನೇ ಸಾಲಿನಿಂದ ಕಾಲೇಜಿಗೆ ಪ್ರವೇಶ ಆರಂಭವಾಗಲಿದ್ದು 150 ಮೆರಿಟ್ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಆಗಸ್ಟ್ ತಿಂಗಳಿಂದ ಪ್ರವೇಶ ಕಲ್ಪಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ವೈದ್ಯಕೀಯ ಕಾಲೇಜು ಆರಂಭಿಸಲು ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ವೈದ್ಯರು ಸಹಿತ 300 ಮಂದಿಯನ್ನು ನೇಮಕ ಮಾಡಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ 78 ಮಂದಿಯನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು 1 ಸಾವಿರ ನರ್ಸ್‌ಗಳನ್ನು ನೇಮಕ ಮಾಡಲು ಗುರಿ ಹೊಂದಲಾಗಿದ್ದು, ಪ್ರಸ್ತುತ 300 ನರ್ಸ್‌ಗಳನ್ನು ನೇಮಕ ಮಾಡಲಾಗಿದೆ. ಜೊತೆಗೆ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಶಿವಾಜಿನಗರದಲ್ಲಿರುವ ಘೋಷಾ ಆಸ್ಪತ್ರೆಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವಿಲೀನಗೊಳಿಸಲಾಗಿದ್ದು, ಘೋಷಾ ಆಸ್ಪತ್ರೆಯಲ್ಲಿ 40 ಹಾಸಿಗೆ ಸೌಲಭ್ಯಯುಳ್ಳ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರವನ್ನು ಆರಂಭಿಸಲಾಗಿದೆ.
ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ವೈದ್ಯಕೀಯ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಸುಮಾರು 197 ಕೋಟಿ ರೂ.ಗಳ ವೆಚ್ಚದಲ್ಲಿ ಬೌರಿಂಗ್ ಕಾಲೇಜಿಗೆ ಸುಸಜ್ಜಿತ 13 ಅಂತಸ್ತಿನ ಕಟ್ಟಡದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾಲೇಜಿನಲ್ಲಿ ಉತ್ತಮ ಸೇವೆ ಒದಗಿಸುವ ಜೊತೆಗೆ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
ಪ್ರಸಕ್ತ ಸಾಲಿನಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಕೇಂದ್ರ ಸರಕಾರದಿಂದ ಅನುಮತಿ ಪಡೆದುಕೊಳ್ಳಲು ವಿಶೇಷ ಶ್ರಮ ವಹಿಸಿದ ಆರ್.ರೋಷನ್ ಬೇಗ್ ಅವರಿಗೆ ಆಸ್ಪತ್ರೆಯ ನಿರ್ದೇಶಕ ಕೆ.ಎಸ್.ಮಂಜುನಾಥ್, ವೈದ್ಯಕೀಯ ಅಧೀಕ್ಷಕಿ ವಿಜಯಲಕ್ಷ್ಮಿ, ಸಂಯೋಜನಾಧಿಕಾರಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಖ್ವಾಜಾ ಮೊಹಿಯುದ್ದೀನ್ ಇಂದು ಕೃತಜ್ಞತೆ ಸಲ್ಲಿಸಿದರು.
ಶಿವಾಜಿನಗರ ಸೇರಿದಂತೆ ನಗರದ ವಿವಿಧ ಪ್ರದೇಶಗಳ ನಾಗರಿಕರಿಗೆ ವಿಶೇಷವಾಗಿ ಬಡ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನಿಂದಲೆ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಆರಂಭಿಸಲು ಅನುಮತಿ ನೀಡಿರುವ ಕೇಂದ್ರ ಸರಕಾರ ಹಾಗೂ ಭಾರತೀಯ ವೈದ್ಯಕೀಯ ಪರಿಷತ್ತಿಗೆ ರೋಷನ್ ಬೇಗ್ ಅಭಿನಂದನೆ ಸಲ್ಲಿಸಿದ್ದಾರೆ.