ಜೂ.10ರಂದು ಹೆದ್ದಾರಿ ರಸ್ತೆ ಬಂದ್
ಬೆಂಗಳೂರು, ಮೇ 31: ರಾಜ್ಯ ಸಮ್ಮಿಶ್ರ ಸರಕಾರ ಭೂಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ವಾಪಾಸ್ಸು ಪಡೆಯಬೇಕೆಂದು ಒತ್ತಾಯಿಸಿ ಜೂ.10 ರಂದು ಹೆದ್ದಾರಿ ರಸ್ತೆ ಬಂದ್ ಚಳುವಳಿ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಭೂಸ್ವಾಧೀನವು ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿಗೆ ನಾಲ್ಕು ಪಟ್ಟು ಬೆಲೆ ನೀಡಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿ ಉದ್ದೇಶಿತ ಯೋಜನೆಗೆ ಮೂರು ವಿಧಗಳಲ್ಲಿ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಆ ಭೂಮಿಯನ್ನು 5 ವರ್ಷಗಳಲ್ಲಿ ಯಾವ ರೈತನಿಂದ ಪಡೆದಿದ್ದಾರೋ ಆ ರೈತನಿಗೆ ವಾಪಾಸ್ಸು ನೀಡಬೇಕು ಎಂದು ಆಗ್ರಹಿಸಿದರು.
ರಸ್ತೆ, ಹೆದ್ದಾರಿ, ನೀರಾವರಿ ಯೋಜನೆ, ವಿಮಾನ ನಿಲ್ದಾಣಗಳು, ರೈಲು ಮಾರ್ಗಗಳು, ಹೀಗೆ ಪೂರ್ಣ ಸಾರ್ವಜನಿಕ ಉದ್ದೇಶಗಳನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಭೂಸ್ವಾಧೀನ ಕೈಗೊಳ್ಳಬಾರದೆಂದು ಅಂದಿನ ಯುಪಿಎ ಸರಕಾರದಿಂದ ನೀತಿ ರೂಪಿಸಲಾಗಿತ್ತು. ಅಲ್ಲದೆ ಆದರೆ ಮುಖ್ಯಮಂತ್ರಿ ಸರಕಾರ ಇದ್ಯಾವುದನ್ನು ಪರಿಗಣಿಸದೇ ಈ ಎಲ್ಲಾ ಅಂಶಗಳನ್ನು ಉಲ್ಲಂಘನೆ ಮಾಡಿ ಒಬ್ಬ ಜಿಲ್ಲಾಧಿಕಾರಿಗೆ ಅಧಿಕಾರವನ್ನು ನೀಡಿ ಒಂದು ಇಡಿಗಂಟು ರೂಪದಲ್ಲಿ ಪರಿಹಾರವನ್ನು ನೀಡಬಹುದಾಗಿದೆ ಎಂದು ಘೋಷಿಸಿ, ಭೂಸ್ವಾಧೀನ ಕಾಯ್ದೆಗೆ ತಿದ್ದಪಡಿ ತರಲಾಗಿದೆ ಎಂದು ತಿಳಿಸಿದರು.
ಇದು ಅತ್ಯಂತ ರೈತ ವಿರೋಧಿಯಾಗಿದ್ದು, ರೈತರಿಗೆ ಮರಣ ಶಾಸನವಾಗಿದೆ. ಆದ್ದರಿಂದ ತಿದ್ದುಪಡಿಯನ್ನು ವಾಪಾಸ್ಸು ಪಡೆಯುವಂತೆ ಮತ್ತು ಬರ ಪರಿಹಾರ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಜಾರಿ ಮಾಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ರೈತರು ಹೆದ್ದಾರಿ ಬಂದ್ ಮಾಡಿ ಚಳವಳಿ ನಡೆಸಲಿದ್ದೇವೆ ಎಂದರು.