ಬಿಬಿಎಂಪಿ ಉಪಚುನಾವಣೆ:ಕಾಂಗ್ರೆಸ್-ಬಿಜೆಪಿ ತಲಾ ಒಂದರಲ್ಲಿ ಗೆಲುವು

Update: 2019-05-31 17:24 GMT

ಬೆಂಗಳೂರು, ಮೇ 31: ಅಕಾಲಿಕ ಮರಣದಿಂದ ತೆರವುಗೊಂಡಿದ್ದ ಬಿಬಿಎಂಪಿ ಎರಡು ವಾರ್ಡ್ ಸದಸ್ಯ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಯು ತಲಾ ಒಂದುಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಸಗಾಯಪುರಂ ವಾರ್ಡ್‌ನಲ್ಲಿ ವಿ.ಏಳುಮಲೈ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಳನಿಯಮ್ಮ ಗೆದ್ದಿದ್ದರೆ, ಉಪ ಮೇಯರ್ ಆಗಿದ್ದ ವೇಳೆ ಹೃದಯಾಘಾತದಿಂದ ಮರಣ ಹೊಂದಿದ ಕಾವೇರಿಪುರಂ ವಾರ್ಡ್‌ನ ರಮೀಳಾ ಉಮಾಶಂಕರ್ ಅವರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಲ್ಲವಿ ಗೆಲುವು ಸಾಧಿಸಿದ್ದಾರೆ.

ಇಂದು ಬೆಳಗ್ಗೆ ಕಾವೇರಿಪುರಂ ವಾರ್ಡ್‌ನಲ್ಲಿ ಮತ ಎಣಿಕೆ ಆರಂಭವಾದಾಗ ಮೊದಲನೇ ಸುತ್ತಿನಿಂದಲೂ ಬಿಜೆಪಿಯ ಪಲ್ಲವಿ ಚನ್ನಪ್ಪ ಮುನ್ನಡೆ ಕಾಯ್ದುಕೊಂಡಿದ್ದರು. 9 ನೆ ಸುತ್ತು ಪೂರ್ಣವಾದ ಬಳಿಕ ಪಲ್ಲವಿ ಅವರು 9,507 ಮತಗಳನ್ನು ಪಡೆಯವ ಮೂಲಕ ಅವರ ಪ್ರತಿಸ್ಪರ್ಧಿ ಮೈತ್ರಿ ಅಭ್ಯರ್ಥಿಯಾದ ಎನ್.ಸುಶೀಲ ಸುರೇಶ್‌ರನ್ನು 78 ಮತಗಳ(9,429) ಅಂತರದಿಂದ ಗೆಲುವು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಮಲಮ್ಮಗೆ 275, ತೇಜಸ್ವಿನಿ ಧನಂಜಯಗೆ 110 ಮತಗಳು ಪಡೆದಿದ್ದಾರೆ.

ಸಗಾಯಪುರಂ ವಾರ್ಡ್‌ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಸದಸ್ಯ ಏಳುಮಲೈ ಸಹೋದರಿ ವಿ.ಪಳನಿಯಮ್ಮಾಳ್ 7,182 ಮತಗಳು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎ.ಜರೀಮ್ 639 ಮತಗಳನ್ನಷ್ಟೇ ಪಡೆದಿದ್ದು ಮುಖಭಂಗವನ್ನು ಅನುಭವಿಸಿದ್ದಾರೆ. ಇನ್ನು ಮೈತ್ರಿ ಅಭ್ಯರ್ಥಿಗೆ ತೀವ್ರ ಪ್ರತಿಸ್ಪರ್ಧಿಯನ್ನು ನೀಡಿದ್ದ ಪಕ್ಷೇತರ ಅಭ್ಯರ್ಥಿ ಮಾರಿಮುತ್ತು 4,143 ಮತ ಪಡೆದು ಸೋಲುಂಡಿದ್ದಾರೆ.

ಸಗಾಯಪುರಂ ವಾರ್ಡ್‌ನ ಮತದಾರರು ಅತ್ಯಂತ ವಿಶ್ವಾಸವಿಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ಅವರ ಪರವಾಗಿ ನಾನು ಇಲ್ಲಿ ನಿಲ್ಲುತ್ತೇನೆ. ಈ ವಾರ್ಡ್‌ನಲ್ಲಿ ಮನೆಗಳಿಲ್ಲದವರಿಗೆ ವಸತಿ ಕಟ್ಟಿಸಿಕೊಡುವುದು ನನ್ನ ಮೊದಲ ಆದ್ಯತೆ ನೀಡುತ್ತೇನೆ. ನನ್ನ ಸಹೋದರ ಅನುಷ್ಠಾನಗೊಳಿಸಿರುವ ಎಲ್ಲ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ.
-ಪಳನಿಮ್ಮಾಳ್,ಸಗಾಯಪುರಂ ವಾರ್ಡ್ ಸದಸ್ಯೆ

ಬಿಜೆಪಿ ಕಾರ್ಯಕರ್ತರು, ಪಾಲಿಕೆ ಸದಸ್ಯರು ಹಾಗೂ ಮಾಜಿ ಸಚಿವ ಸೋಮಣ್ಣ ಸೇರಿದಂತೆ ಅನೇಕರು ಹಗಲು ರಾತ್ರಿ ನನ್ನ ಪರವಾಗಿ ನಡೆಸಿದ ಪ್ರಚಾರ, ಅವರ ಪರಿಶ್ರಮದಿಂದ ನಾನಿಂದು ಗೆದ್ದಿದ್ದೇನೆ. ಸೋಮಣ್ಣ ಕೈಗೊಂಡಿದ್ದ ಅಭಿವೃದ್ಧಿಯೇ ನಾನಿಂದು ಗೆಲ್ಲಲು ಕಾರಣವಾಗಿದೆ. ಲೋಕಸಭೆಯಲ್ಲಿ ಇಲ್ಲಿಂದ ಅಧಿಕ ಮತಗಳು ಬಿಜೆಪಿಗೆ ಬಂದಿದ್ದವು. ಅದರ ಪ್ರಭಾವವೂ ನಾನು ಗೆಲ್ಲಲು ಕಾರಣವಾಗಿದೆ.
-ಸಿ. ಪಲ್ಲವಿ ಚನ್ನಪ್ಪ, ಕಾವೇರಿಪುರ ವಾರ್ಡ್ ಸದಸ್ಯೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News