ಆಕಳ ಹಾಲು ಅಥವಾ ಎಮ್ಮೆ ಹಾಲು....ಯಾವುದು ಆರೋಗ್ಯಕರ?

Update: 2019-06-01 16:48 GMT

ಪರಿಪೂರ್ಣ ಆಹಾರವೆಂದು ಪರಿಗಣಿಸಲಾಗಿರುವ ಹಾಲು ನಮ್ಮ ದೇಹಕ್ಕೆ ಅಗತ್ಯವಾಗಿರುವ ವಿವಿಧ ಪೋಷಕಾಂಶಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ನಮ್ಮ ದೇಹತೂಕವನ್ನು ಕಡಿಮೆ ಮಾಡಿಕೊಳ್ಳಲು ನೆರವಾಗುವುದರಿಂದ ಹಿಡಿದು ನಮ್ಮ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುವವರೆಗೆ ಸರ್ವಾಂಗೀಣ ಪಾತ್ರವನ್ನು ಅದು ಹೊಂದಿದೆ.

ಆಕಳ ಹಾಲು ಮತ್ತು ಎಮ್ಮೆ ಹಾಲನ್ನು ನಾವು ಪ್ರಮುಖವಾಗಿ ಬಳಸುತ್ತೇವೆ. ಆದರೆ ಇವೆರಡರ ನಡುವಿನ ಸಮಾನತೆಗಳು ಮತ್ತು ಅಸಮಾನತೆಗಳು ಹಾಗೂ ನಮ್ಮ ಆರೋಗ್ಯದ ಮೇಲೆ ಇವುಗಳ ಪರಿಣಾಮದ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ?

ಈ ಎರಡೂ ವಿಧಗಳ ಹಾಲು ತಮ್ಮದೇ ಆದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಹೊಂದಿವೆ. ಇವು ನೀಡುವ ಆರೋಗ್ಯಲಾಭಗಳ ಬಗ್ಗೆ ತಿಳಿದುಕೊಂಡು ಬಳಿಕ ಯಾವುದು ಹೆಚ್ಚು ಆರೋಗ್ಯಕರ ಎನ್ನುವುದನ್ನು ನೀವೇ ನಿರ್ಧರಿಸಿ...

ಆಕಳ ಹಾಲಿನ ಆರೋಗ್ಯಲಾಭಗಳು

ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಆಕಳ ಹಾಲಿನಲ್ಲಿ ನಮ್ಮ ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ಕ್ಯಾಲ್ಸಿಯಂ,ರಂಜಕ ಮತ್ತು ಇತರ ಖನಿಜಗಳು ಸಮೃದ್ಧವಾಗಿವೆ. ಅದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುವ ಮೂಲಕ ಅವುಗಳನ್ನು ಆರೋಗ್ಯಯುತವಾಗಿರಿಸುತ್ತದೆ. ಅದರಲ್ಲಿರುವ ಕ್ಯಾಲ್ಸಿಯಂ ಕೂಡ ನಮ್ಮ ಹಲ್ಲುಗಳನ್ನು ಆರೋಗ್ಯವನ್ನು ಹೆಚ್ಚಿಸುತ್ತದೆ.

ಹೃದಯದ ಅರೋಗ್ಯವನ್ನು ಉತ್ತಮಗೊಳಿಸುತ್ತದೆ

ಆಕಳ ಹಾಲಿನಲ್ಲಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು ನಮ್ಮ ಹೃದಯದ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿವೆ. ಅವು ರಕ್ತದಲ್ಲಿಯ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ದೀರ್ಘಾವಧಿಯವರೆಗೆ ಹೃದಯವನ್ನು ಆರೋಗ್ಯಯುತವಾಗಿರಿಸುತ್ತವೆ. ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂತಹ ಹೃದಯ ನಾಳೀಯ ಸಮಸ್ಯೆಗಳನ್ನು ತಡೆಯಲೂ ಅವು ನೆರವಾಗುತ್ತವೆ.

ದೇಹತೂಕವನ್ನು ತಗ್ಗಿಸಲು ನೆರವಾಗುತ್ತದೆ

ಆಕಳ ಹಾಲು ತನ್ನಲ್ಲಿರುವ ಸಮೃದ್ಧ ಪ್ರೋಟಿನ್‌ನಿಂದಾಗಿ ಮತ್ತು ತುಂಬ ಹೊತ್ತು ಹೊಟ್ಟೆ ತುಂಬಿದ ಅನುಭವವನ್ನು ನೀಡುವ ಮೂಲಕ ದಿನವಿಡೀ ಕ್ಯಾಲೊರಿಗಳ ಸೇವನೆಯನ್ನು ಸೀಮಿತಗೊಳಿಸುತ್ತದೆ ಮತ್ತು ದೇಹತೂಕವನ್ನು ತಗ್ಗಿಸಲು ನೆರವಾಗುತ್ತದೆ.

ಮಧುಮೇಹವನ್ನು ತಡೆಯುತ್ತದೆ

ಆಕಳ ಹಾಲನ್ನು ನಿಯಮಿತವಾಗಿ ಸೇವಿಸುವ ಮೂಲಕ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದಾಗಿದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಾಮಿನ್ ಬಿ ಮತ್ತು ಅಗತ್ಯ ಖನಿಜಗಳು ಚಯಾಪಚಯವನ್ನು ಹೆಚ್ಚಿಸುವ ಮೂಲಕ ಗ್ಲುಕೋಸ್ ಮತ್ತು ಇನ್ಸುಲಿನ್ ಮಟ್ಟಗಳನ್ನು ಕ್ರಮಬದ್ಧಗೊಳಿಸುತ್ತವೆ.

ಬೆಳವಣಿಗೆಯನ್ನು ಉತ್ತೇಜಿಸುತ್ತದೆ

ಆಕಳ ಹಾಲು ಸಂಪೂರ್ಣ ಪ್ರೋಟಿನ್‌ನ್ನು ಒಳಗೊಂಡಿದ್ದು, ಇದು ಶರೀರದಲ್ಲಿ ಶಕ್ತಿಯ ಉತ್ಪಾದನೆ ಹಾಗೂ ಸಹಜ ಬೆಳವಣಿಗೆಗೆ ನೆರವಾಗುತ್ತದೆ. ಅತ್ಯಂತ ಪೌಷ್ಟಿಕವಾಗಿರುವ ಆಕಳ ಹಾಲಿನ ಸೇವನೆಯು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯ ಹೆಚ್ಚಳ,ಉರಿಯೂತ ನಿರೋಧಕತೆ ಮತ್ತು ಸ್ನಾಯುಗಳನ್ನು ಸದೃಢಗೊಳಿಸುವುದು ಇವು ಆಕಳ ಹಾಲಿನ ಇತರ ಕೆಲವು ಆರೋಗ್ಯ ಲಾಭಗಳಾಗಿವೆ.

ಆಕಳ ಹಾಲಿನ ಸೇವನೆಯ ಅಡ್ಡಪರಿಣಾಮಗಳು

ಅತಿಯಾದ ಆಕಳ ಹಾಲಿನ ಸೇವನೆಯು ಮೂಳೆಗಳಲ್ಲಿಯ ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗಬಹುದು,ಪ್ರೊಸ್ಟೇಟ್ ಮತ್ತು ಅಂಡಾಶಯ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸಬಹುದು. ಅದರಲ್ಲಿರುವ ಲ್ಯಾಕ್ಟೋಸ್ ವಾಕರಿಕೆ, ಹೊಟ್ಟೆ ಸೆಳೆತ,ಉಬ್ಬರ ಮತ್ತು ಅತಿಸಾರವನ್ನು ಉಂಟು ಮಾಡಬಹುದು. ಮೊಡವೆಗಳು ಹೆಚ್ಚಾಗಬಹುದು ಮತ್ತು ದೇಹದ ತೂಕವನ್ನು ಹೆಚ್ಚಿಸಬಹುದು.

ಎಮ್ಮೆ ಹಾಲಿನ ಆರೋಗ್ಯಲಾಭಗಳು

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಎಮ್ಮೆ ಹಾಲು ಕಡಿಮೆ ಪ್ರಮಾಣದಲ್ಲಿ ಕೊಬ್ಬನ್ನು ಒಳಗೊಂಡಿರುತ್ತದೆ,ಹೀಗಾಗಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟಗಳನ್ನು ಮರುಸಮತೋಲನಗೊಳಿಸುವಲ್ಲಿ ನೆರವಾಗುತ್ತದೆ ಮತ್ತು ಹೃದಯ ನಾಳೀಯ ರೋಗಗಳು, ಅಪಧಮನಿ ಕಾಠಿಣ್ಯ,ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಗೆ ಗುರಿಯಾಗುವುದನ್ನು ತಡೆಯುತ್ತದೆ.

ಬೆಳವಣಿಗೆಯನ್ನು ಉತ್ತೇಜಿಸುತ್ತದೆ

ಎಮ್ಮೆ ಹಾಲಿನಲ್ಲಿ ಹೆಚ್ಚಿನ ಪ್ರೋಟಿನ್ ಇರುವುದರಿಂದ ಮಕ್ಕಳು ಮತ್ತು ಹದಿಹರೆಯದವರಲ್ಲಿ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ವಯಸ್ಕರಿಗೂ ಅದು ಲಾಭದಾಯಕವಾಗಿದೆ.

ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಎಮ್ಮೆ ಹಾಲಿನಲ್ಲಿರುವ ವಿಟಾಮಿನ್ ಎ ಮತ್ತು ಸಿ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಶರೀರವನ್ನು ಸ್ವಚ್ಛಗೊಳಿಸುವ ಜೊತೆಗೆ ದೀರ್ಘಕಾಲಿಕ ಕಾಯಿಲೆಗಳಿಗೆ ಕಾರಣವಾಗುವ ಫ್ರೀ ರ್ಯಾಡಿಕಲ್‌ಗಳು ಮತ್ತು ವಿಷವಸ್ತುಗಳನ್ನು ನಿವಾರಿಸುತ್ತದೆ.

ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಎಮ್ಮೆ ಹಾಲಿನಲ್ಲಿ ಆಕಳ ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಇರುವುದರಿಂದ ಅಸ್ಥಿರಂಧ್ರತೆ ಉಂಟಾಗುವುದನ್ನು ತಡೆಯುತ್ತದೆ ಮತ್ತು ಮೂಳೆಗಳ ಆರೆೋಗ್ಯವನ್ನು ಹೆಚ್ಚಿಸಿ ಅವುಗಳನ್ನು ಪುನಃಶ್ಚೇತನಗೊಳಿಸುತ್ತದೆ.

ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ರಕ್ತ ಪರಿಚಲನೆಯನ್ನು ಹೆಚ್ಚಿಸುವಲ್ಲಿ ಮತ್ತು ರಕ್ತಹೀನತೆಯ ವಿರುದ್ಧ ರಕ್ಷಣೆ ನೀಡುವಲ್ಲಿ ಎವ್ಮೆು ಹಾಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಶರೀರದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುವ ಅದು ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುವ ಮೂಲಕ ಶರೀರದ ಅಂಗಾಂಗಗಳ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿಯೂ ಅದು ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ.

ಎಮ್ಮೆ ಹಾಲಿನ ಅಡ್ಡ ಪರಿಣಾಮಗಳು

ಎಮ್ಮೆ ಹಾಲಿನ ಅತಿಯಾದ ಸೇವನೆಯು ದೇಹತೂಕವನ್ನು ಹೆಚ್ಚಿಸುತ್ತದೆ. ಇತರ ಹಾಲುಗಳಿಗೆ ಹೋಲಿಸಿದರೆ ಅದು ಹೀರಿಕೊಳ್ಳಬಲ್ಲ ಕ್ಯಾಲ್ಸಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ವಯಸ್ಸಾದವರು ಎಮ್ಮೆ ಹಾಲಿನ ಸೇವನೆಯನ್ನು ನಿವಾರಿಸಬೇಕು. ಅತಿಯಾದ ಸೇವನೆಯು ಮಧುಮೇಹಕ್ಕೂ ಕಾರಣವಾಗಬಹುದು.

ಎಮ್ಮೆ ಹಾಲಿಗೆ ಹೋಲಿಸಿದರೆ ಆಕಳ ಹಾಲು ಕಡಿಮೆ ಕೊಬ್ಬನ್ನು ಒಳಗೊಂಡಿರುವದರಿಂದ ತುಲನಾತ್ಮಕವಾಗಿ ತೆಳ್ಳಗಿರುತ್ತದೆ. ಎಮ್ಮೆ ಹಾಲು ಹೆಚ್ಚಿನ ಕೊಬ್ಬನ್ನು ಹೊಂದಿರುವುದರಿಂದ ಜೀರ್ಣಗೊಳ್ಳುವುದು ಕಷ್ಟವಾಗುತ್ತದೆ. ಎಮ್ಮೆ ಹಾಲಿಗೆ ಹೋಲಿಸಿದರೆ ಆಕಳ ಹಾಲು ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿದೆ. ಎಮ್ಮೆ ಹಾಲಿಗೆ ಹೋಲಿಸಿದರೆ ಆಕಳ ಹಾಲಿನಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ ಮತ್ತು ಇದರಿಂದಾಗಿ ಅದು ಶರೀರವನ್ನು ಜಲೀಕರಿಸುವ ಗುಣವನ್ನು ಹೊಂದಿದೆ. ಆಕಳ ಹಾಲಿಗಿಂತ ಹೆಚ್ಚು ಕ್ಯಾಲೊರಿಗಳು ಎಮ್ಮೆ ಹಾಲಿನಲ್ಲಿವೆ.

ಈ ಎರಡೂ ವಿಧದ ಹಾಲುಗಳಲ್ಲಿಯ ಪ್ರಾಥಮಿಕ ವ್ಯತ್ಯಾಸಗಳನ್ನು ಹೋಲಿಸಿದಾಗ ಎರಡೂ ಆರೋಗ್ಯಕರವಾಗಿವೆ ಮತ್ತು ಸೇವನೆಗೆ ಸುರಕ್ಷಿತವಾಗಿವೆ ಎನ್ನುವುದನ್ನು ಅಲ್ಲಗಳೆಯಲಾಗದು. ಎರಡೂ ತಮ್ಮದೇ ಆದ ಆರೋಗ್ಯಲಾಭಗಳು ಮತ್ತು ಅಡ್ಡಪರಿಣಾಮಗಳನ್ನು ಹೊಂದಿರುವುದರಿಂದ ನಮ್ಮ ಶರೀರದ ಮತ್ತು ಆರೋಗ್ಯದ ಅಗತ್ಯಕ್ಕನುಗುಣವಾಗಿ ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ದೇಹತೂಕವನ್ನು ತಗ್ಗಿಸಿಕೊಳ್ಳುವ ಉದ್ದೇಶವಿದ್ದರೆ ಕಡಿಮೆ ಕೊಬ್ಬು, ಕ್ಯಾಲೊರಿಗಳು ಮತ್ತು ಪ್ರೋಟಿನ್ ಹೊಂದಿರುವ ಆಕಳ ಹಾಲು ಉತ್ತಮ ಆಯ್ಕೆಯಾಗಿದೆ. ಇದೇರೀತಿ ದೇಹತೂಕವನ್ನು ಮತ್ತು ಮೂಳೆಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬಯಸಿದ್ದರೆ ಎಮ್ಮೆ ಹಾಲು ಒಳ್ಳೆಯ ಆಯ್ಕೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News