×
Ad

ಮುಳುಗಿದ ದೋಣಿ: 5 ಪ್ರವಾಸಿಗರನ್ನು ರಕ್ಷಿಸಲು ತನ್ನ ಪ್ರಾಣ ಸಮರ್ಪಿಸಿದ ಗೈಡ್

Update: 2019-06-01 22:54 IST
ಸಾಂದರ್ಭಿಕ ಚಿತ್ರ

  ಶ್ರೀನಗರ,ಜೂ.1: ಪ್ರವಾಸಿ ಗೈಡ್ ಒಬ್ಬರು, ದಕ್ಷಿಣ ಕಾಶ್ಮೀರದ ಪ್ರವಾಸಿಧಾಮ ಪಹಲ್‌ಗಾಮ್‌ನಲ್ಲಿ ನದಿಯಲ್ಲಿ ಜಲಸಮಾಧಿಯಾದ ದೋಣಿಯಿಂದ ಪಶ್ಚಿಮ ಬಂಗಾಳದ ಮೂವರು ಪ್ರವಾಸಿಗರು ಸೇರಿದಂತೆ ಐವರನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಬಲಿಕೊಟ್ಟ ಘಟನೆ ಶನಿವಾರ ವರದಿಯಾಗಿದೆ.

  ಮವೂರಾ ಗ್ರಾಮದ ಸಮೀಪ ಪ್ರವಾಸಿಗರ ತಂಡವೊಂದು ಸಂಜೆ ದೋಣಿ ವಿಹಾರದಲ್ಲಿ ತೊಡಗಿತ್ತು. ಆಗ ಹಠಾತ್ತನೇ ಬಿರುಗಾಳಿ ಬೀಸಿದ್ದರಿಂದ ಅವರಿದ್ದ ದೋಣಿ ಬುಡಮೇಲಾಗಿ ಮುಳುಗತೊಡಗಿತು. ದೋಣಿಯಲ್ಲಿ ಮೂವರು ಸ್ಥಳೀಯರು ಹಾಗೂ ಪಶ್ಚಿಮಬಂಗಾಳದ ಪ್ರವಾಸಿ ದಂಪತಿಯಿದ್ದರು.

ಈ ದಂಪತಿಗೆ ಗೈಡ್‌ಆಗಿ ರವೂಫ್ ಅಹ್ಮದ್ ಧರ್ ಜೊತೆಗಿದ್ದರು. ದೋಣಿ ಮಗುಚಿದ ಕೂಡಲೇ ಧರ್ ಮೊದಲಿಗೆ ಈಜಿ ದಡ ಸೇರಿದ್ದರು. ಆದರೆ ಇತರರು ನೀರಿನಲ್ಲಿ ಮುಳುಗುವುದನ್ನ ಕಂಡ ಅವರು ಮತ್ತೆ ನದಿ ಧುಮುಕಿ, ಅವರನ್ನು ರಕ್ಷಿಸುವಲ್ಲ ಸಫಲರಾಗಿದ್ದರು.

ಆದರೆ ದುರದೃಷ್ಟವಶಾತ್ ದೋಣಿಯಲ್ಲಿದ್ದವರೆಲ್ಲರನ್ನೂ ರಕ್ಷಿಸಿದ ರವೂಫ್ ನೀರುಪಾಲಾಗಿದ್ದರು. ಘಟನೆಯ ಬಳಿಕ ತಕ್ಷಣವೇ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಆಗಮಿಸಿ, ರವೂಫ್ ಗಾಗಿ ತೀವ್ರ ಹುಡುಕಾಟ ನಡೆಸಿತ್ತು. ಆದರೆ ಅಷ್ಟು ಹೊತ್ತಿಗೆ ಕತ್ತಲಾಗಿದ್ದರಿಂದ ಶೋಧ ಕಾರ್ಯಾಚರಣೆ ಕೈ ಬಿಡಲಾಗಿತ್ತು.

 ಶನಿವಾರ ಬೆಳಗ್ಗೆ ರವೂಫ್ ಮೃತದೇಹ ಸಮೀಪದ ಭವಾನಿ ಸೇತುವೆ ಬಳಿ ಪತ್ತೆಯಾಗಿತ್ತು. ರವೂಫ್ ಅಹ್ಮದ್ ಧರ್‌ ಅವರ ಸಾಹಸ, ತ್ಯಾಗ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

    ‘‘ಧರ್ ಅವರು ಇಬ್ಬರು ಪ್ರವಾಸಿಗರು ಸೇರಿದಂತೆ ಐವರನ್ನು ರಕ್ಷಿಸುವ ಮೂಲಕ ಎಂದು ಭ್ರಾತೃತ್ವ ಹಾಗೂ ಕಾಳಜಿಯನ್ನು ಬೋಧಿಸುವ ಕಾಶ್ಮೀರಿಯತ್ (ಕಾಶ್ಮೀರ ಅಸ್ಮಿತೆ) ಎಂದರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’’ ಎಂದು ಅನಂತ್‌ನಾಗ್ ಜಿಲ್ಲೆಯ ಉಪಪೊಲೀಸ್ ಆಯುಕ್ತ ಖಾಲಿದ್ ಜಹಾಂಗೀರ್ ತಿಳಿಸಿದ್ದಾರೆ.

 ಮೃತ ಧರ್ ಅವರ ಕುಟುಂಬಿಕರಿಗೆ ಜಮ್ಮುಕಾಶ್ಮೀರದ ಮುಖ್ಯ ಕಾರ್ಯದರ್ಶಿಯ ವರ ಸೂಚನೆ ಮೇರೆಗೆ 4 ಲಕ್ಷ ರೂ.ಗಳ ವಿಶೇಷ ಪರಿಹಾರಧನ ಘೋಷಿಸಲಾಗಿದೆ.

ಆನಂತನಾಗ್‌ನ ಉಪ ಆಯುಕ್ತ ಧರ್ ಅವರ ಹೆಸರನ್ನು ಶೌರ್ಯ ಪ್ರಶಸ್ತಿಗೆ ರಾಜ್ಯಸರಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಪ.ಬಂಗಾಳದ ದಂಪತಿಯಾದ ಮನೀಶ್ ಕುಮಾರ್ ಹಾಗೂ ಶ್ವೇತಾ ಸರಾಫ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚೇತರಿಸಿಕೊಂಡಿದ್ದಾರೆ. ರವೂಫ್ ಅವರ ಪ್ರಾಣಾರ್ಪಣೆಯಿಂದಾಗಿ ತಮ್ಮ ಪ್ರಾಣ ಉಳಿಯಿತೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News