ಬಂಜಾರ ಸಮುದಾಯಕ್ಕೆ ಎಲ್ಲ ರಾಜ್ಯದಲ್ಲೂ ಒಂದೊಂದು ರೀತಿಯ ಮೀಸಲಾತಿ: ದಾಸರಾಮ್ ನಾಯ್ಕ್ ವಿಷಾದ

Update: 2019-06-02 16:00 GMT

ಬೆಂಗಳೂರು, ಜೂ.2: ದೇಶದಲ್ಲಿ 10 ಕೋಟಿ ಬಂಜಾರ ಸಮುದಾಯದವರಿದ್ದರೂ ಎಲ್ಲ ರಾಜ್ಯದಲ್ಲೂ ಒಂದೊಂದು ರೀತಿಯ ಮೀಸಲಾತಿ ನೀಡುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ತೆಲಂಗಾಣ ಬಂಜಾರ ಹಕ್ಕು ಸಮಿತಿ ಅಧ್ಯಕ್ಷ ದಾಸರಾಮ್ ನಾಯ್ಕ್ ವಿಷಾದಿಸಿದ್ದಾರೆ.

ರವಿವಾರ ನಗರದ ಕೆಇಬಿ ಸಭಾಂಗಣದಲ್ಲಿ ರಾಷ್ಟ್ರೀಯ ಗೋರ್ ಬಂಜಾರ ಸೇನಾ ಹಾಗೂ ಗೋರೂರ್ ಸೇವಾ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಗೋರ್-ಬಂಜಾರ್ ವಧು-ವರರ ಪರಿಚಯ ಅನ್ವೇಷಣೆ ಮತ್ತು ಗೋರೂರ್ ಸೇವಾ ಫೌಂಡೇಶನ್ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಂಜಾರ ಸಮುದಾಯವು ದೇಶದ 7 ರಾಜ್ಯದಲ್ಲಿ ಎಸ್ಸಿ, 7 ರಾಜ್ಯದಲ್ಲಿ ಎಸ್ಟಿ, 4 ರಾಜ್ಯದಲ್ಲಿ ಒಬಿಸಿ ಎಂದು ಪರಿಗಣಿಸಲಾಗುತ್ತಿದ್ದು, ಶಿಕ್ಷಣ, ಉದ್ಯೋಗದಲ್ಲಿ ವಂಚಿತರಾಗುತ್ತಿದ್ದೇವೆ. ಆದ್ದರಿಂದ ಬಂಜಾರ ಸಮುದಾಯವನ್ನು ಒಂದೇ ಪಂಗಡಕ್ಕೆ ಸೇರಿಸಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಸಮಾಜದಲ್ಲಿ ನಮ್ಮ ಜನಾಂಗದವರರಿಗೆ ಕಳ್ಳರು, ವಲಸೆ ಹೋಗುವವರು, ಉದ್ಯೋಗ ಹೀನರು ಎಂಬಿತ್ಯಾದಿ ಅರ್ಥ ಕಲ್ಪಿಸಿದ್ದಾರೆ. ಇದು ಬದಲಾಗಬೇಕಾದರೆ ಹೆಚ್ಚಿನ ಮೀಸಲಾತಿ, ಅಧಿಕಾರ ನೀಡಬೇಕು. ರಾಜ್ಯದಲ್ಲಿ ನಮ್ಮ ಸಮುದಾಯಕ್ಕೆ ಸ್ಥಾನಮಾನ ನೀಡಲಾಗಿದೆಯೇ ಹೊರತು ಅಧಿಕಾರ ನೀಡಿಲ್ಲ. ಇನ್ನು ಕೆಲ ರಾಜ್ಯದಲ್ಲಿ ಸ್ಥಾನ ಮಾನವನ್ನೇ ನೀಡಿಲ್ಲ. ಆದ್ದರಿಂದ ಸಮುದಾಯದ ಛೋರಿ, ಛೋರಾರ್, ವೊಳಕ್, ಪಛಾಣೋ ಸೇರಿದಂತೆ ಎಲ್ಲರೂ ಸೇರಿ ಹೋರಾಟ ನಡೆಸಬೇಕಾಗಿದೆ ಎಂದರು.

ಬಂಜಾರ ಸಮುದಾಯದ ವಿಶೇಷವಾದ ಸಂಸ್ಕೃತಿ ಹೊಂದಿದ್ದು, 3 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಸಮುದಾಯದಲ್ಲಿ ವಿಚ್ಛೇದನ ಹೆಚ್ಚಾಗುತ್ತಿದ್ದು, ಗಂಡು - ಹೆಣ್ಣು ಪರಸ್ಪರ ನೇರ ಭೇಟಿ, ವಿಷಯ ಹಂಚಿಕೆಯಿಂದ ತಮ್ಮ ವೈವಾಹಿಕ ಜೀವನ ಚೆನ್ನಾಗಿ ನಡೆಸಲು ವಧು- ವರರ ಸಮಾವೇಶ ನಡೆಸಲಾಗಿದೆ ಎಂದರು.

ಇದೇ ವೇಳೆ ಬಾಮಸೇಫ್ ರಾಜ್ಯಾಧ್ಯಕ್ಷ ಎಸ್.ಜಿ.ಶೀಲವಂತ ಅವರು ಹಿಂದಿ ಯಿಂದ ಕನ್ನಡಕ್ಕೆ ಭಾಷಾಂತರಿಸಿದ ರಾಷ್ಟ್ರೀಯ ವಾಲೆಮಾರಿ ಜನಜಾತಿ ಮೋರ್ಚಾ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಲೂರು ಮಠದ ಸೈನಾಭಗತ್ ಸ್ವಾಮಿ, ಗೋರೂರ್ ಸೇವಟ ಫೌಂಡೇಶನ್ ಟ್ರಸ್ಟ್‌ನ ರಾಜ್ಯಾಧ್ಯಕ್ಷ ಕೆ.ಡಿ.ನಾಯ್ಕ್, ಉಪಾಧ್ಯಕ್ಷ ಹರಿದಾಸ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಹನುಮಂತ ನಾಯ್ಕ್, ಕಿರುತರೆ ನಟ ಎ.ಆರ್.ಗೋವಿಂದಸ್ವಾಮಿ ಉಪಸ್ಥಿತರಿದ್ದರು.

ಕಡಿಮೆ ಜನಸಂಖ್ಯೆ ಹೊಂದಿರುವ ಮೇಲ್ವರ್ಗದವರಿಗೆ ಹಕ್ಕು ಮತ್ತು ಅಧಿಕಾರ ದೊರೆಯುತ್ತಿದೆ. ಬಂಜಾರ ಸಮುದಾಯದವರು ದೇಶದಲ್ಲಿ 10 ಕೋಟಿ ಜನಸಂಖ್ಯೆ ಹೊಂದಿದ್ದರೂ, ನಮ್ಮ ಹಕ್ಕಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.

-ದಾಸರಾಮ್ ನಾಯ್ಕ್ ತೆಲಂಗಾಣ ಬಂಜಾರ ಹಕ್ಕು ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News