ಒಂದು ಸಿಗರೇಟಿನಲ್ಲಿ 4,800 ರಾಸಾಯನಿಕಗಳು: ಡಾ.ಪಿ.ಎಸ್.ಹರ್ಷ

Update: 2019-06-03 16:33 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 3: ಒಂದು ಸಿಗರೇಟನ್ನು 4,800 ರಾಸಾಯನಿಕಗಳಿಂದ ತಯಾರಿಸಲಾಗುತ್ತಿದ್ದು, ಇದು ಕಣ್ಣಿಗೆ ಕಾಣದ ಯುದ್ಧದಲ್ಲಿ ಆಗುವ ಹಾನಿಗಿಂತಲೂ ಭೀಕರ ಎಂದು ಕೆಎಸ್ಸಾರ್ಟಿಸಿ ನಿರ್ದೇಶಕ (ಭದ್ರತಾ ಜಾಗೃತ) ಡಾ.ಪಿ.ಎಸ್.ಹರ್ಷ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ‘ಸಿಗರೇಟನ್ನು ದೂರವಿಡಿ-ನಿಮ್ಮ ಉಸಿರನ್ನು ಕಾಪಾಡಿ’ ಕಾರ್ಯಕ್ರಮದಲ್ಲಿ ಸಿಗರೇಟು ಹಾಗೂ ತಂಬಾಕಿನ ಮೇಲೆ ನೀರನ್ನು ಸುರಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾವಿರಾರು ರಾಸಾಯನಿಕಗಳನ್ನು ತಂಬಾಕಿನಲ್ಲಿ ಬಳಸಲಾಗುತ್ತಿದ್ದು, ಪ್ರತಿವರ್ಷ ದೇಶದಲ್ಲಿ 70 ಲಕ್ಷ ಜನರು ನೇರವಾಗಿ ತಂಬಾಕು ಸೇವನೆಗೆ 8 ರಿಂದ 10 ಲಕ್ಷ ಜನ ಬಲಿಯಾಗುತ್ತಿದ್ದಾರೆ ಎಂದರು.

ಕೆಎಸ್ಸಾರ್ಟಿಸಿ ಸಂಸ್ಥೆಯು ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. 6 ವರ್ಷಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡುವವರಿಂದ ಅಂದಾಜು 1,31,223 ಪ್ರಯಾಣಿಕರಿಂದ 2.62ಕೋಟಿ ರೂ.ದಂಡವನ್ನು ವಸೂಲಿ ಮಾಡಲಾಗಿದೆ. ದಂಡ ವಿಧಿಸುವುದೊಂದೇ ಪರಿಹಾರವಲ್ಲವಾದರೂ, ಸಾರ್ವಜನಿಕರು ಹಾಗೂ ನಿಗಮದ ಸಿಬ್ಬಂದಿಗಳಲ್ಲಿ ಅರಿವು ಮೂಡಿಸಲು ಇದು ಅವಶ್ಯಕವಾಗಿದೆ. ದೇಶದಲ್ಲಿ ಈವರೆಗೂ ಯಾವುದೇ ಸಾರಿಗೆ ನಿಗಮಗಳಲ್ಲಿ ಇಷ್ಟು ಕಟ್ಟುನಿಟ್ಟಾಗಿ ಧೂಮಪಾನ ನಿಷೇಧವನ್ನು ಜಾರಿಗೊಳಿಸಿಲ್ಲ ಎಂದು ವಿಷಾದಿಸಿದರು.

ಕೆಎಸ್ಸಾರ್ಟಿಸಿ ನಿಗಮವು ತಂಬಾಕು ಸೇವನೆಯನ್ನು ತಡೆಯಲು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ವಿಭಾಗೀಯ ಕಚೇರಿಗಳು, ಘಟಕಗಳು, ಕಾರ್ಯಾಗಾರಗಳು, ತರಬೇತಿ ಕೇಂದ್ರಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ. ಇಲ್ಲಿ ಧೂಮಪಾನ ಮಾಡುವುದು ಅಪರಾಧ, ಉಲ್ಲಂಘನೆಯಾದಲ್ಲಿ 200 ರೂ.ವರೆಗೆ ದಂಡ ವಿಧಿಸಲಾಗುತ್ತಿದೆ ಎಂದು ತಿಳಿಸಿದರು.

ಕೆಎಸ್ಸಾರ್ಟಿಸಿ ನಿರ್ದೇಶಕ ಪಿ.ಆರ್.ಶಿವಪ್ರಸಾದ್ ಮಾತನಾಡಿ, ಪ್ರತಿದಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 1ರಿಂದ 1.25 ಲಕ್ಷ ಜನ ಪ್ರಯಾಣಿಸುತ್ತಾರೆ, ಕೆಎಸ್ಸಾರ್ಟಿಸಿ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ, ಮಾರಾಟ, ಬಳಕೆಯನ್ನು ಸಂಪೂರ್ಣ ನಿಷೇಧಿಸಿದ್ದು ತಂಬಾಕು ಸೇವನೆ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಹೇಳಿದರು.

ಸಾರ್ವಜನಿಕ ಬಸ್ ನಿಲ್ದಾಣ ಹಾಗೂ ಘಟಕಗಳಲ್ಲಿ ಕಾನೂನು ಬಾಹಿರವಾಗಿ ಧೂಮಪಾನ ಸೇವನೆ ಮಾಡುವಂತಹ ವ್ಯಕ್ತಿಗಳಿಗೆ ಎಪ್ರಿಲ್ 2018ರಿಂದ ಮಾರ್ಚ್ 2019 ರವರೆಗೂ 17,616ಜನರಿಗೆ ದಂಡ ವಿಧಿಸಲಾಗಿದ್ದು, 35.23 ಲಕ್ಷ ರೂ.ದಂಡ ಸಂಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News