ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣ: ಬಿಬಿಎಂಪಿ ಸದಸ್ಯ ಸುರೇಶ್‌ಗೆ ಜಾಮೀನು ಮಂಜೂರು

Update: 2019-06-03 16:36 GMT

ಬೆಂಗಳೂರು, ಜೂ.3: ವಕೀಲೆ ಧರಣಿ(27) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎ.ನಾರಾಯಣಪುರ ವಾರ್ಡ್‌ನ ಪಾಲಿಕೆ ಸದಸ್ಯ ವಿ.ಸುರೇಶ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಕುರಿತು ಜಾಮೀನು ಕೋರಿ ವಿ.ಸುರೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. 

ಮಹದೇವಪುರದ ಉದಯನಗರ ನಿವಾಸಿ ಆಗಿದ್ದ ಧರಣಿ, 2018ರ ಡಿಸೆಂಬರ್ 31ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ದೂರು ನೀಡಿದ್ದ ತಾಯಿ ದೇವಿ, ಮಗಳ ಸಾವಿಗೆ ಕಾರ್ಪೊರೇಟರ್ ಸುರೇಶ್ ಹಾಗೂ ಆತನ ಸಹಚರರೇ ನೇರ ಹೊಣೆ ಎಂದು ಆರೋಪಿಸಿದ್ದರು. ಅದರನ್ವಯ ಸುರೇಶ್ ಸೇರಿ ಏಳು ಮಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ(ಐಪಿಸಿ 360) ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು.

ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೆ ತಲೆಮರೆಸಿಕೊಂಡಿದ್ದ ಸುರೇಶ್, ಎರಡೂವರೆ ತಿಂಗಳ ಬಳಿಕ ತಮಿಳುನಾಡಿನ ಸೇಲಂ ಬಳಿಯ ರೆಸಾರ್ಟ್‌ನಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿತ್ತು. ಸುರೇಶ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಪೀವು ಜಾಮೀನು ಮಂಜೂರು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News