ಸಾಮರಸ್ಯ-ಸಹೋದರತ್ವದ ಪ್ರತೀಕ ರಮಝಾನ್: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-06-03 17:14 GMT

ಬೆಂಗಳೂರು, ಜೂ.3: ಸಮಾಜದಲ್ಲಿ ಸಾಮರಸ್ಯ ಹಾಗೂ ಸಹೋದರತ್ವದ ಪ್ರತೀಕವಾಗಿರುವ ಪವಿತ್ರ ರಮಝಾನ್ ಮಾಸವು ಪ್ರತಿಯೊಬ್ಬರಿಗೂ ಒಳಿತನ್ನು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದರು.

ಸೋಮವಾರ ನಗರದ ಅರಮನೆ ಮೈದಾನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿಯೊಬ್ಬ ಮುಸ್ಲಿಮರ ಜೀವನದಲ್ಲಿಯೂ ರಮಝಾನ್ ಮಾಸ ವಿಶಿಷ್ಟವಾದದ್ದು. ಒಂದು ತಿಂಗಳ ಕಾಲ ಪ್ರತಿದಿನ ಸುಮಾರು 13 ರಿಂದ 14 ಗಂಟೆಗಳ ಕಾಲ ಅನ್ನ, ನೀರಿಲ್ಲದೇ ದೇವರ ಪ್ರಾರ್ಥನೆ ಮಾಡುತ್ತಾರೆ. ಈ ಪವಿತ್ರ ಮಾಸ ನಿಮಗೆಲ್ಲರಿಗೂ ಒಳಿತನ್ನು ಮಾಡಲಿ ಎಂದು ಅವರು ಹೇಳಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಇಡೀ ವಿಶ್ವದಲ್ಲಿ ಅಶಾಂತಿ ತಲೆದೋರಿದೆ. ರಮಝಾನ್ ಮಾಸವು ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಪ್ರತಿಯೊಬ್ಬರಿಗೂ ಪ್ರೇರೇಪಿಸಲಿ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್‌ ಅಹ್ಮದ್‌ ಖಾನ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ವರ್ಷ ರಮಝಾನ್ ಮಾಸದಲ್ಲಿ ಮುಸ್ಲಿಮ್ ಸಮುದಾಯದವರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸಿಕೊಂಡು ಬಂದಿದ್ದಾರೆ. ನಿನ್ನೆ ಮೈಸೂರಿನಲ್ಲಿ ಮಾಡಿದ್ದರು. ಇವತ್ತು ಬೆಂಗಳೂರಿನಲ್ಲಿ ಆಯೋಜಿಸುವಂತೆ ನನಗೆ ಜವಾಬ್ದಾರಿ ನೀಡಿದ್ದರು ಎಂದರು.

ಮಾಜಿ ಸಚಿವ ರೋಷನ್ ಬೇಗ್ ನಮ್ಮ ಸಮುದಾಯದ ಹಿರಿಯ ನಾಯಕ. ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದ ಅವರು ಇಲ್ಲಿಗೆ ಆಗಮಿಸಿಲ್ಲ. ನಮ್ಮ ನಡುವೆ ಯಾವುದೇ ರೀತಿಯ ಮನಸ್ತಾಪಗಳಿಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮೌಲಾನ ಲುತ್ಫುಲ್ಲಾ ರಶಾದಿ, ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಮೌಲಾನ ಮುಹಮ್ಮದ್ ಮುಝಮ್ಮಿಲ್, ಸಚಿವ ಯು.ಟಿ.ಖಾದರ್, ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ಎನ್.ಎ.ಹಾರೀಸ್, ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ರಿಝ್ವನ್ ಅರ್ಶದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News