×
Ad

ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರಾದ ಸಚಿವ ಡಿ.ಕೆ.ಶಿವಕುಮಾರ್

Update: 2019-06-03 22:30 IST

ಬೆಂಗಳೂರು, ಜೂ.3: ಹೊಸದಿಲ್ಲಿಯ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಇತರೆ ಆರೋಪಿಗಳಾದ ರಾಜೇಂದ್ರ, ಆಂಜನೇಯ ಹಾಗೂ ಸುನೀಲ್ ಶರ್ಮಾ ಹಾಜರಾಗಿದ್ದರು.

ಡಿ.ಕೆ.ಶಿವಕುಮಾರ್‌ಗೆ ಸಂಬಂಧಪಟ್ಟ ಹೊಸದಿಲ್ಲಿಯ ಫ್ಲಾಟ್‌ಗಳ ಮೇಲೆ ಐಟಿ ದಾಳಿ ಮಾಡಿತ್ತು. ಈ ಹಿನ್ನೆಲೆ ಪ್ರಕರಣ ರದ್ದು ಕೋರಿ ಡಿಕೆಶಿ ಹಾಗೂ ಆಪ್ತರು ಜನಪ್ರತಿನಿಧಿಗಳ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಈ ವಿಚಾರಣೆ ಸೋಮವಾರ ನ್ಯಾಯಾಲಯದಲ್ಲಿ ನಡೆಯಿತು. ಆದಾಯ ತೆರಿಗೆ ಇಲಾಖೆ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಅವರು, ಹೊಸದಿಲ್ಲಿಯ ನಿವಾಸದ ಮೇಲೆ ಐಟಿ ದಾಳಿ ನಡೆಸಿದಾಗ ಸಿಕ್ಕ ಹಣ ಡಿ.ಕೆ.ಶಿವಕುಮಾರ್‌ಗೆ ಸೇರಿದ್ದಾಗಿದೆ. ಈ ಹಣವನ್ನು 3ನೆ ಆರೋಪಿ ಸುನೀಲ್ ಶರ್ಮಾ ಮೂಲಕ ಹೊಸದಿಲ್ಲಿಗೆ ರವಾನೆ ಮಾಡಲಾಗಿತ್ತು. ಸುನೀಲ್ ಶರ್ಮಾರಿಂದ ಹಣ ಪಡೆದ ರಾಜೇಂದ್ರ ಹಾಗೂ ಆಂಜನೇಯ ಸೇರಬೇಕಾದವರಿಗೆ ಹಣವನ್ನು ಸೇರಿಸಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.

ಹಣ ರವಾನೆ ಮಾಡುವಾಗ ಈ ಆರೋಪಿಗಳು ಲಕ್ಷ ಹಣಕ್ಕೆ ಕೆಜಿ ಎಂದು ಕೋಡ್ ವರ್ಡ್ ಬಳಕೆ ಮಾಡಿ ಹವಾಲಾ(ಕಾನೂನು ಬಾಹಿರ ಹಣದ ವಹಿವಾಟು) ಮೂಲಕವೂ ಹಣ ಸಾಗಾಟ ಮಾಡಿದ್ದಾರೆ. ಈ ಕೃತ್ಯಕ್ಕೆ ಶರ್ಮಾ ಟ್ರಾವಲ್ಸ್‌ನ ಸುನೀಲ್ ಶರ್ಮಾ ಮನೆ ಹಾಗೂ ಶರ್ಮಾ ಮನೆಯ ಫ್ಲಾಟ್‌ನ ಒಂದು ರೂಮ್ ಡಿ.ಕೆ.ಶಿವಕುಮಾರ್ ಬಳಸುತ್ತಿದ್ದರು. ಇದನ್ನ ಖುದ್ದಾಗಿ ತನಿಖೆಯಲ್ಲಿ ಸುನೀಲ್ ಶರ್ಮಾ. ಐಟಿ ಎದುರು ಹೇಳಿಕೆ ನೀಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿವಾದ ನಡೆಸಲು ಸಚಿವ ಡಿಕೆಶಿ ಪರ ವಕೀಲರು, ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News