×
Ad

ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಗ್ರೆನೇಡ್ ರಹಸ್ಯ ಬಯಲು

Update: 2019-06-03 22:44 IST
ಫೈಲ್ ಚಿತ್ರ

ಬೆಂಗಳೂರು, ಜೂ.3: ರಾಜಧಾನಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಗ್ರೆನೇಡ್, ಭಾರತೀಯ ಸೇನೆಗೆ ಸೇರಿದ್ದು ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಮೇ 30ರಂದು ಮೆಜೆಸ್ಟಿಕ್‌ನ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ 1ರಲ್ಲಿ ಕಟ್ಟಿಗೆಯ ಬಾಕ್ಸ್‌ನಲ್ಲಿ ಗ್ರೆನೇಡ್ ಪತ್ತೆಯಾಗಿತ್ತು. ಇದನ್ನು ಕಂಡ ಪ್ರಯಾಣಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಬಳಿಕ ರೈಲ್ವೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಪರಿಶೀಲನೆ ನಡೆಸಿ ನಿರ್ಜೀವ(ಡಮ್ಮಿ) ಗ್ರೆನೇಡ್ ಎಂದಿದ್ದರು.

ಈ ಸಂಬಂಧ ತನಿಖೆ ಮುಂದುವರೆಸಿ, ಗ್ರೆನೇಡ್‌ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನಿಸಿದ್ದರು. ಇದೀಗ ತಜ್ಞರು, ಭಾರತೀಯ ಸೇನೆಗೆ ಸೇರಿದ್ದ ಗ್ರೆನೇಡ್ ಎಂಬುದನ್ನು ಹೇಳಿದ್ದು, ಈ ವರದಿಯನ್ನು ರೈಲ್ವೆ ಪೊಲೀಸರಿಗೆ ಮುಟ್ಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಂದಿದ್ದು, ಹೇಗೆ?

ಮಿಲಿಟರಿ ಯೋಧರ ತರಬೇತಿಗಾಗಿ ಮೇ 29ರಂದು ಗ್ರೆನೇಡ್ ಅನ್ನು ರೈಲ್ವೆ ನಿಲ್ದಾಣ ಮೂಲಕ ಕೊಂಡೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಪೆಟ್ಟಿಗೆಯಿಂದ ಕೆಳಗೆ ಬಿದ್ದಿದ್ದು, ಸೇನಾಧಿಕಾರಿಗಳು ಗಮನಿಸಿಲ್ಲ. ಮೇ 30ರಂದು ಬೆಳಗ್ಗೆ ರೈಲ್ವೆ ಸಿಬ್ಬಂದಿಗಳ ಕಣ್ಣಿಗೆ ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News