ಇಂದು ಶ್ರೀಲಂಕಾಕ್ಕೆ ಅಫ್ಘಾನಿಸ್ತಾನ ವಿರುದ್ಧ ಗೆಲ್ಲುವ ವಿಶ್ವಾಸ

Update: 2019-06-04 03:45 GMT

ಕಾರ್ಡಿಫ್, ಜೂ.3: ನ್ಯೂಝಿಲ್ಯಾಂಡ್ ವಿರುದ್ಧ ತಾನಾಡಿದ ಮೊದಲ ವಿಶ್ವಕಪ್ ಪಂದ್ಯದ ಎಲ್ಲ ವಿಭಾಗಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಶ್ರೀಲಂಕಾ ತಂಡ ಮಂಗಳವಾರ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮಂಗಳವಾರ 2ನೇ ಲೀಗ್ ಪಂದ್ಯವನ್ನಾಡಲಿದ್ದು, ತಾವಾಡಿದ್ದ ಮೊದಲ ಪಂದ್ಯವನ್ನು ಸೋತಿವೆ.

ನ್ಯೂಝಿಲ್ಯಾಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತಿರುವ ಶ್ರೀಲಂಕಾ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಪಡೆಯಲು ವಿಫಲವಾಗಿದೆ. ಔಟಾಗದೆ 52 ರನ್ ಗಳಿಸಿ ಏಕಾಂಗಿ ಹೋರಾಟ ನೀಡಿದ್ದ ನಾಯಕ ಹಾಗೂ ಆರಂಭಿಕ ಆಟಗಾರ ಡಿಮುತ್ ಕರುಣರತ್ನೆಗೆ ಯಾವ ದಾಂಡಿಗನೂ ಸಾಥ್ ನೀಡಲಿಲ್ಲ. ಅಂತಿಮವಾಗಿ ಲಂಕಾ ತಂಡ ಕೇವಲ 136 ರನ್‌ಗೆ ಆಲೌಟಾಗಿತ್ತು. ಲಂಕಾ ಬೌಲರ್‌ಗಳು ಕೂಡ ಎದುರಾಳಿ ತಂಡಕ್ಕೆ ಒತ್ತಡ ಹೇರಲು ವಿಫಲವಾಗಿದ್ದು, ನ್ಯೂಝಿಲ್ಯಾಂಡ್ ವಿಕೆಟ್ ನಷ್ಟವಿಲ್ಲದೆ 16 ಓವರ್‌ಗಳಲ್ಲಿ ಗುರಿ ತಲುಪಿತ್ತು.

ಶ್ರೀಲಂಕಾ ಬ್ಯಾಟಿಂಗ್ ವಿಭಾಗವು ಎರಡು ಪ್ರತ್ಯೇಕ ಸಂದರ್ಭದಲ್ಲಿ ಸಂಪೂರ್ಣ 50 ಓವರ್‌ಗಳಲ್ಲಿ ಆಡಲು ವಿಫಲವಾಗಿದೆ. ಇದರಲ್ಲಿ ಅಭ್ಯಾಸ ಪಂದ್ಯ ಕೂಡ ಸೇರಿದೆ. ಇದೀಗ ಉತ್ತಮ ಬೌಲಿಂಗ್ ದಾಳಿ ಹೊಂದಿರುವ ಅಫ್ಘಾನಿಸ್ತಾನವನ್ನು ಎದುರಿಸಬೇಕಾಗಿದೆ. ತನ್ನ ತಂಡದ ವೇಗದ ಬೌಲರ್‌ಗಳು ವಾತಾವರಣದ ಲಾಭ ಪಡೆಯಲಿದ್ದಾರೆ ಎಂದು ನಾಯಕ ಕರುಣರತ್ನೆ ವಿಶ್ವಾಸದಲ್ಲಿದ್ದಾರೆ. ಅಫ್ಘಾನಿಸ್ತಾನ ಬ್ರಿಸ್ಟೋಲ್‌ನಲ್ಲಿ ನಡೆದ ತಾನಾಡಿದ್ದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ದ 7 ವಿಕೆಟ್‌ಗಳಿಂದ ಸೋತಿದೆ. ಅಫ್ಘಾನ್‌ನ ಆರಂಭಿಕ ಆಟಗಾರರು ಖಾತೆ ತೆರೆಯಲು ವಿಫಲರಾಗಿದ್ದರು. ಆದಾಗ್ಯೂ ಮಧ್ಯಮ ಕ್ರಮಾಂಕದ ದಾಂಡಿಗರ ಕಾಣಿಕೆಯ ನೆರವಿನಿಂದ 200ಕ್ಕೂ ಅಧಿಕ ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News