ಪಶ್ಚಿಮಘಟ್ಟ ನಾಶವಾದರೆ ರಾಜ್ಯಕ್ಕೆ ಬರಗಾಲ ತಪ್ಪಿದ್ದಲ್ಲ: ಪರಿಸರ ವಿಜ್ಞಾನಿ ಯಲ್ಲಪ್ಪರೆಡ್ಡಿ

Update: 2019-06-04 15:37 GMT

ಬೆಂಗಳೂರು, ಜೂ.4: ಪಶ್ಚಿಮ ಘಟ್ಟಗಳು ಉಳಿದರೆ ಮಾತ್ರ ಕರ್ನಾಟಕವನ್ನು ಒಳಗೊಂಡಂತೆ ದೇಶಕ್ಕೆ ಮಳೆ, ಬೆಳೆ. ಆದರೆ, ಕೆಲವು ಸ್ವಾರ್ಥಿಗಳು ಎತ್ತಿನಹೊಳೆ ಯೋಜನೆಯಡಿ ಇಡೀ ಪಶ್ಚಿಮಘಟ್ಟದ ಕಾಡುಗಳನ್ನು ಸರ್ವನಾಶ ಮಾಡುವ ಮೂಲಕ ಇಡೀ ರಾಜ್ಯವನ್ನು ಮರಭೂಮಿ ಮಾಡಲು ಹೊರಟಿದ್ದಾರೆ ಎಂದು ಪರಿಸರ ವಿಜ್ಞಾನಿ ಯಲ್ಲಪ್ಪರೆಡ್ಡಿ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ಬಿಳೇಕಹಳ್ಳಿ ಜನಜಾಗೃತಿ ಸಾಮಾಜಿಕ ಕಲಾ ವೇದಿಕೆ ನಗರದ ಚಿತ್ರಕಲಾ ಪರಿಷತ್‌ನಲ್ಲಿ ನೇತ್ರಾವತಿ ನದಿಯನ್ನು ನುಂಗುತ್ತಿರುವ ಎತ್ತಿನಹೊಳೆ ಕಾಮಗಾರಿಯ ದುಷ್ಪರಿಣಾಮಗಳ ಕುರಿತು ಛಾಯಾಚಿತ್ರಗಾರ ಸುಧೀರ್‌ಶೆಟ್ಟಿ ತೆಗೆದಿರುವ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ನಿರಂತರ ಪ್ರಕ್ರಿಯೆ ಫಲವಾಗಿ ಪಶ್ಚಿಮಘಟ್ಟಗಳು ರೂಪಗೊಂಡು ಜೀವವೈವಿಧ್ಯತೆಯ ತಾಣವಾಗಿದೆ. ಇಲ್ಲಿನ ಮುಗಿಲಿಗೆ ತಾಕುವಂತಹ ಬೆಟ್ಟಗಳು, ಯಾವಾಗಲೂ ಹಚ್ಚ ಹಸಿರಿನಿಂದ ಕೂಡಿರುವ ಕಾಡುಗಳ ಪರಿಣಾಮವಾಗಿ ರಾಜ್ಯದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಆದರೆ, ಕೆಲವು ಸ್ವಾರ್ಥ ರಾಜಕಾರಣಿಗಳು ನೇತ್ರಾವತಿ ನದಿ ನೀರನ್ನು ಬಯಲುಸೀಮೆಯ ಜಿಲ್ಲೆಗಳಿಗೆ ಹರಿಸುತ್ತೇವೆಂದು ಹೇಳುವ ಮೂಲಕ ಪಶ್ಚಿಮಘಟ್ಟವನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಅವರು ವಿಷಾದಿಸಿದರು.

ಪಶ್ವಿಮಘಟ್ಟಗಳು ಉಳಿದರೆ ಮಾತ್ರ ನೇತ್ರಾವತಿ ನದಿ ಕಣಿವೆಗಳಲ್ಲಿ ಮಳೆ ನೀರು ಹರಿಯಲು ಸಾಧ್ಯ. ಆದರೆ, ಎತ್ತಿನಹೊಳೆ ಯೋಜನೆಯಡಿ ಪಶ್ಚಿಮಘಟ್ಟಗಳು ನಾಶ ಮಾಡಿದರೆ ಮಳೆಯೆ ಇಲ್ಲವಾಗಿ ಇಡೀ ರಾಜ್ಯದ ಜನತೆ ಬರಗಾಲಕ್ಕೆ ತುತ್ತಾಗಬೇಕಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಕೂಡಲೆ ಎತ್ತಿನಹೊಳೆ ಯೋಜನೆಯನ್ನು ಸ್ಥಗಿತಗೊಳಿಸುವುದೊಂದೆ ಪರಿಹಾರವೆಂದು ಅವರು ಹೇಳಿದರು.

ಕಾನೂನು ತಜ್ಞ ಕೆ.ಎನ್.ಸೋಮಶೇಖರ್ ಮಾತನಾಡಿ, ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದ್ದು, ಕೆಲವು ಭ್ರಷ್ಟರು ಈ ಯೋಜನೆಯಡಿ ಹಣ ಮಾಡುವುದಕ್ಕೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯಿಂದ ಬಯಲುಸೀಮೆಯ ಪ್ರದೇಶಕ್ಕೆ ನೀರು ಹರಿಸುತ್ತೇವೆಂದು ಹೇಳುತ್ತಿರುವುದು ಕೇವಲ ಕಟ್ಟುಕತೆಯಷ್ಟೆ ಎಂದು ಆರೋಪಿಸಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿಯಿಂದ ಈಗಾಗಲೆ ಪಶ್ಚಿಮಘಟ್ಟ ಸಮಸ್ಯೆಗೆ ಸಿಲುಕಿದ್ದು, ಜೀವ ವೈವಿಧ್ಯಗಳು ಅಪಾಯಕ್ಕೆ ಸಿಲುಕಿವೆ. ಹೀಗಾಗಿ ಜನಸಾಮಾನ್ಯರಿಗೆ, ಪರಿಸರಕ್ಕೆ ಹಾಗೂ ಜೀವ ಸಂಕುಲಕ್ಕೆ ಹಾನಿಯನ್ನುಂಟು ಮಾಡುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಈ ಕೂಡಲೆ ನಿಲ್ಲಿಸಬೇಕೆಂದು ಕಾನೂನು ಹೋರಾಟ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಿ, ಪಶ್ಚಿಮಘಟ್ಟ ಉಳಿಸಿ ಹೋರಾಟವನ್ನು ರಾಜಕೀಯ ವಿಷಯವಾಗಿ ರೂಪಿಸಬೇಕು. ಜನಪರ, ಪರಿಸರ ಪರವಾಗಿ ಚಿಂತಿಸುವ ಜನಪ್ರತಿನಿಧಿಗಳು, ಕಾನೂನು ತಜ್ಞರು, ಸಾಹಿತಿಗಳು, ರೈತ ಸಂಘಟನೆಗಳ ಹೋರಾಟಗಾರರನ್ನು ಒಳಗೊಂಡಂತೆ ದೊಡ್ಡ ಮಟ್ಟದ ಆಂದೋಲನ ಹಾಗೂ ಜನಜಾಗೃತಿಯಿಂದ ಪಶ್ಚಿಮಘಟ್ಟವನ್ನು ಉಳಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಈ ವೇಳೆ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತ್ರಾವತಿ ನದಿ ಕಣಿವೆಯಲ್ಲಿ ಎತ್ತಿನಹೊಳೆ ಯೋಜನೆಗಾಗಿ ನಡೆಯುತ್ತಿರುವ ಮರಗಳ ನಾಶ, ಬೆಟ್ಟ, ಗುಡ್ಡಗಳನ್ನು ಕೊರೆದಿರುವುದನ್ನು ಛಾಯಾಚಿತ್ರಗಳ ಮೂಲಕ ವೀಕ್ಷಿಸಿ ಬೇಸರ ವ್ಯಕ್ತಪಡಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪರಿಸರವಾದಿ ದಿನೇಶ್ ಹೊಳ್ಳ, ನೀರಾವರಿ ತಜ್ಞ ನರಸಿಂಹಪ್ಪ, ಛಾಯಾಚಿತ್ರಗಾರ ಸುಧೀರ್ ಶೆಟ್ಟಿ ಮತ್ತಿತರರಿದ್ದರು.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿರುವ ಕಪ್ಪತ್ತುಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪೆನಿಗೆ ಒತ್ತೆ ಇಡಲಾಗಿತ್ತು, ಆದರೆ, ಇದರ ವಿರುದ್ಧ ಜನಾಂದೋಲನ ರೂಪಿತಗೊಂಡು ಅದನ್ನು ಉಳಿಸಿಕೊಳ್ಳಲಾಯಿತು, ಅದೇ ಮಾದರಿಯಲ್ಲಿ ಪಶ್ಚಿಮಘಟ್ಟ ಪ್ರದೇಶವನ್ನು ಉಳಿಸಿಕೊಳ್ಳಲು ಜನಾಂದೋಲನ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ.

-ಎಸ್.ಆರ್.ಹಿರೇಮಠ, ಸಾಮಾಜಿಕ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News