ನಿಮ್ಮ ಉಗುರುಗಳ ಆರೋಗ್ಯದ ಮೇಲೆ ನಿಗಾ ಇರಲಿ

Update: 2019-06-04 16:47 GMT

ಉಗುರು ರೋಗಗಳಿಂದ ಪಾರಾಗಲು ಸೂಕ್ತ ಮುನ್ನೆಚ್ಚರಿಕೆಗಳು ಮತ್ತು ಚಿಕಿತ್ಸೆಗಳು ಅಗತ್ಯವಾಗುತ್ತವೆ. ನಮ್ಮ ಉಗುರುಗಳು ನಮ್ಮ ಶರೀರದ ಆರೋಗ್ಯದ ಕುರಿತು ಬಹಳಷ್ಟನ್ನು ಹೇಳುತ್ತವೆ. ಉಗುರುಗಳ ಮೇಲೆ ಬಿಳಿಯ ಚುಕ್ಕಿಗಳಂತಹ ಸೋಂಕುಗಳು ಯಾತನೆಗೆ ಕಾರಣವಾಗುತ್ತವೆ ಮತ್ತು ವೈರಾಣು ಸೋಂಕುಗಳ ಬಳಿಕ ವಿಟಾಮಿನ್ ಮತ್ತು ಪ್ರೋಟಿನ್ ಕೊರತೆ ಉಗುರುಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತವೆ. ಉಗುರುಗಳ ಸ್ವಚ್ಛತೆಗೆ ಗಮನ ನೀಡದಿರುವುದು ಮತ್ತು ಅವು ಸದಾ ಒದ್ದೆಯಾಗಿರುವುದು ಹೆಚ್ಚಿನ ಉಗುರು ರೋಗಗಳಿಗೆ ಕಾರಣವಾಗುತ್ತವೆ. ಅಂತಹ ಕೆಲವು ಉಗುರು ರೋಗಗಳ ಬಗ್ಗೆ ಮಾಹಿತಿಯಿಲ್ಲಿದೆ....

ಮಾಂಸಖಂಡದೊಳಗೆ ಉಗುರಿನ ಬೆಳವಣಿಗೆ: ಇದನ್ನು ಒನಿಕೊಗ್ರಿಫೋಸಿಸ್ ಎಂದೂ ಕರೆಯುತ್ತಾರೆ. ಉಗುರು ತನ್ನ ಸುತ್ತಲಿನ ಅಂಗಾಂಶಗಳನ್ನು ಪ್ರವೇಶಿಸುವುದು ಈ ರೋಗಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಅತಿಯಾಗಿ ಬೆಳೆದ ಕಾಲ್ಬೆರಳ ಚರ್ಮವನ್ನು ಮಾಂಸಖಂಡದೊಳಗೆ ಬೆಳೆದ ಉಗುರು ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಉಗುರಿನ ಸುತ್ತ ಕೆಂಪಾಗುವುದು,ಊತ ಮತ್ತು ನೋವು ಇದರ ಲಕ್ಷಣಗಳಾಗಿವೆ. ಇದು ಸೋಂಕಿಗೆ ತಿರುಗುವ ಮುನ್ನ ವೈದ್ಯರನ್ನು ಅಗತ್ಯ ಸಂಪರ್ಕಿಸಬೇಕು. ಬಿಗಿಯಾದ ಶೂ ಅಥವಾ ಪಾದರಕ್ಷೆಗಳನ್ನು ಹೆಚ್ಚು ಹೊತ್ತು ಧರಿಸುವುದರಿಂದಲೂ ಈ ರೋಗವು ಉಂಟಾಗುತ್ತದೆ.

ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕುಗಳು: ಒದ್ದೆ ಶೂಗಳು ಅಥವಾ ಕಾಲುಚೀಲಗಳನ್ನು ಧರಿಸುವದರಿಂದ,ಉಗುರುಗಳ ಸ್ವಚ್ಛತೆಯನ್ನು ಸಂಪೂರ್ಣವಾಗಿ ಕಡೆಗಣಿಸುವುದರಿಂದ ಈ ವಿಧದ ಸೋಂಕು ಉಂಟಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳು ಈ ಸೋಂಕುಗಳಿಗೆ ಕಾರಣವಾಗುತ್ತವೆ. ಉಗುರು ಮಡಿಕೆಗಳು ಅಥವಾ ನಮಗೆ ಕಾಣುವ ಉಗುರಿನ ಬುಡಗಳು ಸುತ್ತಲಿನ ಅಂಗಾಂಶಗಳು ಮತ್ತು ಉಗುರು ತಟ್ಟೆಯ ನಡುವೆ ಬಾಧಕಗಳಾಗಿ ವರ್ತಿಸುತ್ತವೆ. ಉಗುರುಗಳು ಕೆಂಪಗಾಗುವುದು,ಉಗುರು ಮಡಿಕೆಗಳಲ್ಲಿ ಬಾವು ಮತ್ತು ಅತೀವ ನೋವು ಈ ರೋಗದ ಲಕ್ಷಣಗಳಾಗಿವೆ.

ಬಿರುಕುಗಳು: ಈ ಸಮಸ್ಯೆಯಿರುವವರು ಉಗುರಿನ ಬೆಳವಣಿಗೆಯಲ್ಲಿ ತೊಂದರೆಯನ್ನು ಎದುರಿಸುತ್ತಾರೆ. ಉಗುರುಗಳು ಸಣ್ಣ ಚೆಕ್ಕೆಗಳಾಗಿ ತುಂಡಾಗುತ್ತವೆ,ಸುಲಿಯುತ್ತವೆ ಅಥವಾ ಸೀಳುಗಳುಂಟಾಗುತ್ತವೆ. ಇದು ಉಗುರುಗಳಲ್ಲಿ ತೈಲಾಂಶ ಮತ್ತು ಆರ್ದ್ರತೆಯ ಕೊರತೆಯನ್ನು ಸೂಚಿಸುತ್ತದೆ.

ಹಸಿರು ಬಣ್ಣಕ್ಕೆ ತಿರುಗುವುದು: ಕೆಲವೊಮ್ಮೆ ಉಗುರು ತಟ್ಟೆ ಮತ್ತು ಉಗುರ ಬುಡದ ನಡುವೆ ಹಸಿರು ಬಣ್ಣ ಕಾಣಿಸಿಕೊಳ್ಳುತ್ತದೆ. ಬ್ಯಾಕ್ಟೀರಿಯಾ ಸೋಂಕು ಇದಕ್ಕೆ ಕಾರಣವಾಗುತ್ತದೆ. ಉಗುರನ್ನು ಕತ್ತರಿಸಿದರೆ ಈ ಸಮಸ್ಯೆ ಪರಿಹಾರಗೊಳ್ಳುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಉಗುರು ಮತ್ತೆ ಅದೇ ಬಣ್ಣದಲ್ಲಿ ಬೆಳೆಯುತ್ತದೆ.

ದಪ್ಪ ಉಗುರುಗಳು: ಒನಿಚಾಕ್ಸ್ಸಿಸ್ ಎಂದು ಕರೆಯಲಾಗುವ ಈ ರೋಗವುಂಟಾದಾಗ ಉಗುರುಗಳು ತೀರ ದಪ್ಪಗಾಗುತ್ತವೆ,ಚರ್ಮದ ಮಟ್ಟಕ್ಕಿಂತ ಮೇಲಕ್ಕೆದ್ದು ಬಣ್ಣದಲ್ಲಿ ಬದಲಾವಣೆಯಾಗುತ್ತದೆ. ಇದು ಆಂತರಿಕ ಆರೋಗ್ಯ ಸಮಸ್ಯೆಗಳನ್ನೂ ಸೂಚಿಸುತ್ತದೆ ಮತ್ತು ಯಾವುದೇ ಔಷಧಿಯ ಅಡ್ಡಪರಿಣಾಮದಿಂದಲೂ ಉಂಟಾಗುತ್ತದೆ.

ಬಿಯುಸ್ ಲೈನ್: ಕೆಲವೊಮ್ಮೆ ಉಗುರುಗಳಲ್ಲಿ ದಪ್ಪನೆಯ ಗೆರೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಅಪೌಷ್ಟಿಕತೆ,ನೋವು ಅಥವಾ ಯಾವುದಾದರೂ ಕಾಯಿಲೆ ಇವುಗಳಿಗೆ ಕಾರಣವಾಗಿರುತ್ತವೆ. ಉಗುರುಗಳಲ್ಲಿ ಇಂತಹ ಬದಲಾವಣೆಗಳು ಕಂಡಾಗ ತಕ್ಷಣ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯ.

 ಉಗುರುಗಳು ಸೋಂಕಿಗೊಳಗಾಗುತ್ತವೆ ಮತ್ತು ಇದು ಯಾರ ಗಮನಕ್ಕೂ ಬರುವುದಿಲ್ಲ,ಉಗುರಿಗೆ ಹಾನಿಯಾದಾಗಲೇ ಅದು ನಮ್ಮ ಗಮನಕ್ಕೆ ಬರುತ್ತದೆ. ಹೀಗಾಗಿ ಅವು ಸದಾ ಒಣದಾಗಿ ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ವಿಟಾಮಿನ್‌ಎ,ವಿಟಾಮಿನ್ ಬಿ,ಕ್ಯಾಲ್ಸಿಯಂ,ಕಬ್ಬಿಣ ಮತ್ತು ಪ್ರೋಟಿನ್‌ಗಳಂತಹ ಸಾಮಾನ್ಯ ಕೊರತೆಗಳನ್ನು ಉಗುರುಗಳಲ್ಲಿ ಬದಲಾವಣೆಗಳನ್ನು ಕಂಡು ಸುಲಭವಾಗಿ ತಿಳಿದುಕೊಳ್ಳಬಹುದು. ವಿಟಾಮಿನ್ ಎ ಮತ್ತು ಕ್ಯಾಲ್ಸಿಯಂ ಕೊರತೆಯಿದ್ದಾಗ ಉಗುರುಗಳು ಬಿರುಕು ಬಿಡುವುದು ಸಾಮಾನ್ಯ. ವಿಟಾಮಿನ್ ಡಿ ಕೊರತೆಯಿದ್ದರೆ ಉಗುರುಗಳು ಶುಷ್ಕಗೊಳ್ಳುವ ಜೊತೆಗೆ ಕಪ್ಪು ಛಾಯೆಗೆ ತಿರುಗುತ್ತವೆ,ಬಾಗುತ್ತವೆ. ಕಬ್ಬಿಣದ ಕೊರತೆಯಿದ್ದರೆ ಉಗುರುಗಳು ಪೇಲವಗೊಳ್ಳುತ್ತವೆ ಮತ್ತು ಅಪರೂಪದ ಪ್ರಕರಣಗಳಲ್ಲಿ ಚಮಚದ ರೂಪ ಪಡೆಯುತ್ತವೆ. ಕೆಲವು ಉಗುರು ರೋಗಗಳು ಶ್ವಾಸಕೋಶ ಕಾಯಿಲೆ,ಹೃದಯದ ರಕ್ತನಾಳಗಳಲ್ಲಿ ತಡೆ,ಯಕೃತ್ತಿನ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತವೆ. ನಮ್ಮ ಉಗುರುಗಳು ನಮ್ಮ ಆಂತರಿಕ ಸ್ವಾಸ್ಥದ ಕನ್ನಡಿಯಿದ್ದಂತೆ. ಅವುಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದರೆ ತಕ್ಷಣ ಚರ್ಮರೋಗ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News