ಖಿನ್ನತೆ ನಿವಾರಕಗಳ ಸೇವನೆ ವೃದ್ಧರಲ್ಲಿ ಪೃಷ್ಠದ ಮೂಳೆಮುರಿತದ ಅಪಾಯವನ್ನು ಹೆಚ್ಚಿಸಬಹುದು

Update: 2019-06-04 16:51 GMT

ವಯಸ್ಸಾದ ವ್ಯಕ್ತಿಗಳು ಆಗಾಗ್ಗೆ ಖಿನ್ನತೆಗೊಳಗಾಗುವುದು ಸಾಮಾನ್ಯ ಸಮಸ್ಯೆಯಾಗಿದ್ದು, 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪ್ರಾಯದ ವ್ಯಕ್ತಿಗಳನ್ನು ಹೆಚ್ಚಾಗಿ ಕಾಡುತ್ತದೆ. ವೃದ್ಧರಲ್ಲಿ ಖಿನ್ನತೆಯು ಕಡೆಗಣಿಸುವ ವಿಷಯವಲ್ಲ. ಖಿನ್ನತೆಯಿಂದ ಪಾರಾಗಲು ಅವರಿಗೆ ಖಿನ್ನತೆ ನಿವಾರಕಗಳನ್ನು ನೀಡಲಾಗುತ್ತದೆ. ಆದರೆ ಖಿನ್ನತೆ ನಿವಾರಕಗಳ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಬಹುದು.

ಇತ್ತೀಚಿನ ಅಧ್ಯಯನವೊಂದು ಖಿನ್ನತೆ ನಿವಾರಕಗಳ ಅಡ್ಡ ಪರಿಣಾಮಗಳನ್ನು ವಿವರಿಸಿದೆ.

ಖಿನ್ನತೆ ನಿವಾರಕಗಳನ್ನು ಸೇವಿಸುವ ವಯಸ್ಸಾದ ವ್ಯಕ್ತಿಗಳು ಆಕಸ್ಮಿಕವಾಗಿ ಬಿದ್ದರೆ ಪೃಷ್ಠದ ಮೂಳೆ ಮುರಿತದ ಹೆಚ್ಚಿನ ಸಾಧ್ಯತೆಯಿರುತ್ತದೆ ಎಂದು ಅಧ್ಯಯನವು ತಿಳಿಸಿದೆ. ಮಾನಸಿಕ ಆರೋಗ್ಯವನ್ನು ಹೆಚ್ಚಿಸುವ ಹಲವಾರು ಔಷಧಿಗಳನ್ನು ಸೇವಿಸುವ ವಯಸ್ಸಾದವರು ಪೃಷ್ಠದ ಮೂಳೆ ಮುರಿತಕ್ಕೆ ಗುರಿಯಾಗುವ ಹೆಚ್ಚಿನ ಸಾಧ್ಯತೆಯನ್ನು ಎದುರಿಸುತ್ತಿರುತ್ತಾರೆ ಎಂದು ಅದು ಹೇಳಿದೆ. ಈ ಔಷಧಿಗಳನ್ನು ವಿವಿಧ ಮಾನಸಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಈ ಔಷಧಿಗಳು ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳ ಚಿಕಿತ್ಸೆಗೂ ಬಳಕೆಯಾಗುತ್ತವೆ.

ಖಿನ್ನತೆ ನಿವಾರಕಗಳು,ಔಷಧಿಯಾಗಿ ಬಳಕೆಯಾಗುವ ಅಮಲು ಪದಾರ್ಥಗಳು,ಆತಂಕ-ಉದ್ವೇಗವನ್ನು ನಿವಾರಿಸಲು ಬಳಕೆಯಾಗುವ ಬೆಂರೊಡಯಾಝೆಪಿನ್‌ಗಳು,ಸ್ಕಿರೆಫ್ರೇನಿಯಾ ಮತ್ತು ಬೈಪೋಲಾರ್ ಡಿಸಾರ್ಡರ್‌ಗೆ ಚಿಕಿತ್ಸೆ ನೀಡುವ ಆ್ಯಂಟಿಸೈಕೊಟಿಕ್‌ಗಳು ಪೃಷ್ಠದ ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಯುನಿವರ್ಸಿಟಿ ಆಫ್ ಸೌಥ್ ಆಸ್ಟ್ರೇಲಿಯಾ ನಡೆಸಿದ ಅಧ್ಯಯನವು ಬೆಟ್ಟು ಮಾಡಿದೆ. ಅಧ್ಯಯನ ವರದಿಯು ಆಸ್ಟ್ರೇಲಿಯನ್ ಪ್ರಿಸ್ಕೈಬರ್ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ.

ಈ ಔಷಧಿಗಳನ್ನು ಜಂಟಿಯಾಗಿ ಸೇವಿಸಿದರೆ ಅಪಾಯವು ಇನ್ನಷ್ಟು ಹೆಚ್ಚುತ್ತದೆ. ಖಿನ್ನತೆ ನಿವಾರಕಗಳು ಮತ್ತು ಆತಂಕ ಶಮನದ ಔಷಧಿಗಳನ್ನು ಒಟ್ಟಾಗಿ ಸೇವಿಸುತ್ತಿದ್ದರೆ ಈ ಅಪಾಯವು ಐದು ಪಟ್ಟುಗಳವರೆಗೆ ಹೆಚ್ಚುತ್ತದೆ ಎನ್ನುತ್ತದೆ ವರದಿ.

 ಕಡಿಮೆ ಪ್ರಮಾಣದಲ್ಲಿ ಇಂತಹ ಔಷಧಿಗಳ ಸೇವನೆ,ಹೆಚ್ಚಿನ ವ್ಯಾಯಾಮ ಅಥವಾ ವೃತ್ತಿಪರ ಮಾನಸಿಕ ಚಿಕಿತ್ಸೆಯಂತಹ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನೂ ಅಧ್ಯಯನವು ಸೂಚಿಸಿದೆ.

ವಯಸ್ಸಾದ ವ್ಯಕ್ತಿಗಳಲ್ಲಿ ಖಿನ್ನತೆಯನ್ನು ನೈಸರ್ಗಿಕವಾಗಿಯೂ ನಿರ್ವಹಿಸಬಹುದಾಗಿದ್ದು,ಇದರಿಂದ ಖಿನ್ನತೆ ನಿವಾರಕದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬಹುದು. ನಿಯಮಿತವಾಗಿ ಲಘು ವ್ಯಾಯಾಮ,ಜನರೊಂದಿಗೆ ಸಂವಾದಕ್ಕೆ ಅವಕಾಶ ಕಲ್ಪಿಸುವ ಕ್ಲಬ್ ಅಥವಾ ಗುಂಪಿಗೆ ಸೇರಿಕೊಳ್ಳುವುದು,ತಮ್ಮ ನೆಚ್ಚಿನ ಸಂಗೀತವನ್ನು ಆಲಿಸುವುದು ಅಥವಾ ಚಲನಚಿತ್ರವನ್ನು ವೀಕ್ಷಿಸುವುದು,ಮೊಮ್ಮಕ್ಕಳು ಅಥವಾ ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುವುದು ಇವೆಲ್ಲ ಇಂತಹ ಕ್ರಮಗಳಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News