ಎಸ್ಸಿ-ಎಸ್ಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ 30 ಸಾವಿರ ಕೋಟಿ ರೂ.: ಸಚಿವ ಪ್ರಿಯಾಂಕ್ ಖರ್ಗೆ

Update: 2019-06-04 17:01 GMT

ಬೆಂಗಳೂರು, ಜೂ.4: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 2019-20ನೇ ಸಾಲಿನ ಬಜೆಟ್‌ನಲ್ಲಿ 30,444.99 ಕೋಟಿ ರೂ.ಗಳ ಅನುದಾನ ಕಾಯ್ದಿರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2019-20ನೆ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉಪಯೋಜನೆಗೆ ಸಂಬಂಧಿಸಿದಂತೆ ನಡೆದ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

2018-19ರಲ್ಲಿ ಉಪಯೋಜನೆಯಡಿ 29,723.57 ಕೋಟಿ ರೂ. ಅನುದಾನ ಮೀಸಲಿರಿಸಲಾಗಿತ್ತು. ಇದರಲ್ಲಿ 28,110.71 ಕೋಟಿ ರೂ.ಗಳನ್ನು ಕ್ರಿಯಾ ಯೋಜನೆಯಡಿ ವೆಚ್ಚ ಮಾಡಲಾಗಿದ್ದು, ಶೇ.94ರಷ್ಟು ಗುರಿ ಸಾಧಿಸಲಾಗಿದೆ ಎಂದು ಅವರು ಹೇಳಿದರು.

2019-20ನೆ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ರಾಜ್ಯ ಯೋಜನೆಗಾಗಿ 11,766.64 ಕೋಟಿ. ರೂ.ಗಳನ್ನು ರಾಜಸ್ವ ಹಾಗೂ 6600.86 ಕೋಟಿ. ರೂ.ಗಳನ್ನು ಬಂಡವಾಳ ಶೀರ್ಷಿಕೆಯಡಿ ಹಾಗೂ 3235.13 ಕೋಟಿ ರೂ.ಗಳನ್ನು ಜಿಲ್ಲಾ ಶೀರ್ಷಿಕೆಯಡಿ(ಒಟ್ಟು 21,602.63 ಕೋಟಿ ರೂ.) ಒದಗಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

2019-20ನೆ ಸಾಲಿನಲ್ಲಿ ಪರಿಶಿಷ್ಟ ವರ್ಗಗಳ ಉಪಯೋಜನೆಯಡಿ ರಾಜ್ಯ ಯೋಜನೆಗಾಗಿ 4847.73 ಕೋಟಿ. ರೂ.ಗಳನ್ನು ರಾಜಸ್ವ ಹಾಗೂ 2688.83 ಕೋಟಿ. ರೂ.ಗಳನ್ನು ಬಂಡವಾಳ ಶೀರ್ಷಿಕೆಯಡಿ ಹಾಗೂ 1325.80 ಕೋಟಿ ರೂ.ಗಳನ್ನು ಜಿಲ್ಲಾ ಶೀರ್ಷಿಕೆಯಡಿ (ಒಟ್ಟು 8842.36 ಕೋಟಿ ರೂ.) ಒದಗಿಸಲಾಗಿದೆ ಎಂದು ಅವರು ಹೇಳಿದರು.

2019-20ನೆ ಸಾಲಿನಲ್ಲಿ ನೂತನ ಯೋಜನೆಗಳು: ಪ.ಜಾತಿ, ಪ.ಪಂಗಡಗಳ ರೈತರಿಗೆ ಟ್ರಾಕ್ಟರ್ ಖರೀದಿಸಲು 25ಕ್ಕೂ ಹೆಚ್ಚಿನ ಅಶ್ವಶಕ್ತಿ ಸಾಮರ್ಥ್ಯದ ಟ್ರಾಕ್ಟರ್ ಕೊಳ್ಳಲು ಗರಿಷ್ಟ 3 ಲಕ್ಷ ರೂ. ಸಹಾಯಧನ ಒದಗಿಸುವುದು. ರೈತರಿಗೆ ದಾಳಿಂಬೆ, ದ್ರಾಕ್ಷಿ ಬೆಳೆಯಲು ಪ್ರೋತ್ಸಾಹ ನೀಡಲು ಕ್ರೈಸ್ ವಸತಿ ಶಾಲೆಗಳ ಆವರಣದಲ್ಲಿ ಹಣ್ಣಿನ ಗಿಡ ಬೆಳೆಸುವುದು, ಪಾಲಿಹೌಸ್ ನಿರ್ಮಾಣ 1 ಎಕರೆ ಪ್ರದೇಶಕ್ಕೆ ಮಿತಿಗೊಳಿಸಿ ಶೇ.90ರಷ್ಟು ಸಹಾಯಧನ ನೀಡುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ರೈತರಿಗೆ ರೇಷ್ಮೆ ಹುಳು ಸಾಕಾಣೆ ಮನೆ ನಿರ್ಮಾಣಕ್ಕೆ ಶೇ. 90ರಷ್ಟು ಸಹಾಯಧನ, ಕಾಟೇಜ್ ಯಂತ್ರ, ಮಲ್ಟಿ ಎಂಡ್ ಘಟಕ ಸ್ಥಾಪನೆ, ರೀಲಿಂಗ್ ಶೆಡ್ ನಿರ್ಮಿಸಲು ಸಹಾಯಧನ. ನಾಟಿ ಕೋಳಿ ಸಾಕಾಣೆಗೆ 1000 ರೂ.ಸಹಾಯಧನ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ.ಜಾತಿ, ಪ.ಪಂಗಡಗಳ ಮೀನುಗಾರರಿಗೆ ಸಂಚಾರಿ ಮೀನು ತಿಂಡಿಗಳ ಕ್ಯಾಂಟೀನ್, ತಾಜಾ ಮೀನು ಮಾರಾಟ ಮಳಿಗೆ ಸ್ಥಾಪಿಸಲು ಗರಿಷ್ಠ 7 ಲಕ್ಷ ರೂ. ಸಹಾಯಧನ ಒದಗಿಸಲಾಗುವುದು ಎಂದು ಅವರು ಹೇಳಿದರು.

ಬಡವರ ಬಂಧು ಯೋಜನೆ ಮಾದರಿಯಲ್ಲಿ ಪ.ಜಾತಿ, ಪ.ಪಂಗಡಗಳ ಮಹಿಳೆಯರಿಗೆ 10,000 ಸಹಾಯಧನ. ಐಸಿಡಿಎಸ್ ಯೋಜನೆಯಡಿ ಉಳಿಕೆಯಾಗುವ ಅನುದಾನದಿಂದ ಅಂಗನವಾಡಿ ಕಟ್ಟಡಗಳ ನಿರ್ಮಾಣ. ನಗರ ಪ್ರದೇಶಗಳ 100 ಅಂಗನವಾಡಿ ಕೇಂದ್ರಗಳ ನಿರ್ವಹಣ ವೆಚ್ಚ ಭರಿಸುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಪ.ಜಾತಿ, ಪ.ಪಂಗಡಗಳ ಅಭ್ಯರ್ಥಿಗಳಿಗೆ ಉನ್ನತಿ ಯೋಜನೆಯಡಿ ನವೋದ್ಯಮಗಳನ್ನು ಸ್ಥಾಪಿಸಲು ಗರಿಷ್ಠ 50 ಲಕ್ಷ ರೂ.ಪ್ರೋತ್ಸಾಹ ಧನ, ಕ್ರೈಸ್ ವಸತಿ ಶಾಲೆಗಳ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ವಿಸ್ತರಣೆ, ಕೆ.ಎಸ್.ಐ.ಡಿ.ಸಿ ಸಂಸ್ಥೆಯಿಂದ ಕೈಗಾರಿಕಾ ಶೆಡ್ ನಿರ್ಮಾಣಕ್ಕೆ ಶೇ 50ರಷ್ಟು ಸಹಾಯಧನ ನೀಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News