ಅಸಾಂಜ್ ಬಂಧನ ಮನವಿ ತಿರಸ್ಕರಿಸಿದ ಸ್ವೀಡನ್ ನ್ಯಾಯಾಲಯ

Update: 2019-06-04 17:12 GMT

ಸ್ಟಾಕ್‌ಹೋಮ್ (ಸ್ವೀಡನ್), ಜೂ. 4: 2010ರ ಅತ್ಯಾಚಾರ ಪ್ರಕರಣವೊಂದರಲ್ಲಿ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಓರ್ವ ಶಂಕಿತ ಎಂಬುದಾಗಿ ತಾನು ಪರಿಗಣಿಸಿರುವುದಾಗಿ ಸ್ವೀಡನ್‌ನ ನ್ಯಾಯಾಲಯವೊಂದು ಸೋಮವಾರ ಹೇಳಿದೆ. ಆದರೆ, ಅವರ ಬಂಧನಕ್ಕೆ ಆದೇಶ ಹೊರಡಿಸಬೇಕೆಂಬ ಪ್ರಾಸಿಕ್ಯೂಟರ್ ಮನವಿಯನ್ನು ತಿರಸ್ಕರಿಸಿದೆ.

ಇದರೊಂದಿಗೆ, ಅಸಾಂಜ್‌ರನ್ನು ಕ್ಷಿಪ್ರವಾಗಿ ಬ್ರಿಟನ್‌ನಿಂದ ಸ್ವೀಡನ್‌ಗೆ ಗಡಿಪಾರು ಮಾಡಿಸಿಕೊಳ್ಳುವ ಪ್ರಾಸಿಕ್ಯೂಟರ್ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ.

ಪ್ರಸಕ್ತ ಅಸಾಂಜ್ ಬ್ರಿಟನ್‌ನ ಜೈಲಿನಲ್ಲಿ ಇರುವುದರಿಂದ, ಅವರನ್ನು ಪ್ರಶ್ನಿಸುವುದಕ್ಕಾಗಿ ಔಪಚಾರಿಕವಾಗಿ ಸ್ವೀಡನ್ ‌ನಲ್ಲಿ ಬಂಧಿಸಬೇಕಾದ ಅಗತ್ಯವಿಲ್ಲ ಎಂದು ಅಪ್ಸಲ ಜಿಲ್ಲಾ ನ್ಯಾಯಾಲಯವು ಹೇಳಿದೆ.

‘‘ಜೂಲಿಯನ್ ಅಸಾಂಜ್ ಪ್ರಸಕ್ತ ಜೈಲಿನಲ್ಲಿರುವುದರಿಂದ, ಯುರೋಪಿಯನ್ ತನಿಖಾ ಆದೇಶವೊಂದರ ಸಹಾಯದಿಂದ ತನಿಖೆ ಮುಂದುವರಿಯಬಹುದಾಗಿದೆ. ಇದಕ್ಕೆ ಜೂಲಿಯನ್ ಅಸಾಂಜ್‌ ರನ್ನು ಸ್ವೀಡನ್‌ ನಲ್ಲಿ ಬಂಧಿಸಬೇಕಾದ ಅಗತ್ಯವಿಲ್ಲ. ಹಾಗಾಗಿ, ಜೂಲಿಯನ್ ಅಸಾಂಜ್‌ ರನ್ನು ಬಂಧಿಸುವುದು ಸರಿಯಾದ ಕ್ರಮವೆಂದು ನ್ಯಾಯಾಲಯ ಭಾವಿಸುವುದಿಲ್ಲ’’ ಎಂದು ಹೇಳಿಕೆಯೊಂದರಲ್ಲಿ ನ್ಯಾಯಾಲಯ ತಿಳಿಸಿದೆ.

ಅಮೆರಿಕದ ಹಲವು ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸುವ ಮೂಲಕ ಆ ದೇಶದ ಆಕ್ರೋಶಕ್ಕೆ ತುತ್ತಾಗಿರುವ ಆಸ್ಟ್ರೇಲಿಯ ಪ್ರಜೆ ಅಸಾಂಜ್ 7 ವರ್ಷಗಳ ಕಾಲ ಲಂಡನ್‌ನಲ್ಲಿರುವ ಇಕ್ವೆಡಾರ್‌ನ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದರು. ಎಪ್ರಿಲ್ 11ರಂದು ಇಕ್ವೆಡಾರ್ ಆಶ್ರಯವನ್ನು ಹಿಂದಕ್ಕೆ ಪಡೆದುಕೊಂಡ ಬಳಿಕ, ಲಂಡನ್ ಪೊಲೀಸರು ಅಸಾಂಜ್ ರನ್ನು ಬಂಧಿಸಿದರು. ಜಾಮೀನು ಶರತ್ತುಗಳನ್ನು ಉಲ್ಲಂಘಿಸಿದ ಆರೋಪವನ್ನು ಅಸಾಂಜ್ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News