×
Ad

ಸಚಿವ ಡಿಕೆಶಿ ತೆರಿಗೆ ವಂಚಿಸಿರುವುದು ಕಂಡು ಬರುತ್ತದೆ- ಐಟಿ ಪರ ವಕೀಲರ ಹೇಳಿಕೆ

Update: 2019-06-04 23:15 IST

ಬೆಂಗಳೂರು, ಜೂ. 4: ಹೊಸದಿಲ್ಲಿಯ ಫ್ಲಾಟ್‌ಗಳಲ್ಲಿ ಐಟಿ ವಶಪಡಿಸಿಕೊಂಡಿರುವ ಹಣ, ಇತರೆ ವಸ್ತುಗಳಿಗೆ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಇತರ ನಾಲ್ವರು ತೆರಿಗೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಕುರಿತು ಪ್ರಕರಣದಿಂದ ಕೈಬಿಡಬೇಕೆಂದು ಕೋರಿ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಆಂಜನೇಯ ಹನುಮಂತಯ್ಯ, ಸುನೀಲ್‌ಕುಮಾರ್ ಶರ್ಮ ಮತ್ತು ರಾಜೇಂದ್ರ ಸಲ್ಲಿಸಿರುವ ಅರ್ಜಿಗಳನ್ನು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ವಿಚಾರಣೆ ನಡೆಸಿದರು.

ಐಟಿ ಪರ ವಾದಿಸಿದ ನಾವದಗಿ ಅವರು, ಹೊಸದಿಲ್ಲಿಯ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಫ್ಲಾಟ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕ ಹಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ದಾಖಲಿಸಿರುವ ದೂರು ಕ್ರಮಬದ್ಧವಾಗಿದೆ. ದಾಳಿ ವೇಳೆ ಸಿಕ್ಕಿರುವ ಹಣ ಮತ್ತು ಒಡವೆಗಳಿಗೆ ಸಮರ್ಪಕ ದಾಖಲೆಗಳಿಲ್ಲ. ಹೀಗಾಗಿ, ಡಿಕೆಶಿ ವಿರುದ್ಧ ಐಟಿ ದೂರು ದಾಖಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಆರ್ಥಿಕ ವರ್ಷ ಮುಗಿಯುವ ಮೊದಲೆ ದಾಳಿ ಮಾಡುವ ಅಧಿಕಾರ ಐಟಿ ಇಲಾಖೆಗಿದೆ. ಐಟಿ ವಶಪಡಿಸಿಕೊಂಡ ಹಣ ಅಥವಾ ಇತರೆ ವಸ್ತುಗಳಿಗೆ 120 ದಿನಗಳೊಳಗೆ ದಾಖಲೆ ಸಲ್ಲಿಸಬೇಕು. ಅದರೆ, ಡಿಕೆಶಿ ಮತ್ತು ಆಪ್ತರು ಮಾಹಿತಿ ಸಲ್ಲಿಸಿಲ್ಲ. ಹೀಗಾಗಿ, ತೆರಿಗೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗುತ್ತದೆ ಎಂದು ವಾದ ಮಂಡಿಸಿದರು. ಆದರೆ, ಸಮಯಾವಕಾಶದ ಕೊರತೆಯಿಂದ ಪ್ರತಿವಾದ ಮಂಡನೆಗೆ ಸಚಿವ ಡಿಕೆಶಿ ಪರ ವಕೀಲರಿಗೆ ಅವಕಾಶ ಸಿಗಲಿಲ್ಲ. ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು. 2017ರ ಆ.2ರಂದು ಐಟಿ ಅಧಿಕಾರಿಗಳು ಡಿಕೆಶಿಗೆ ಸೇರಿದ ಬೆಂಗಳೂರು ಮತ್ತು ಹೊಸದಿಲ್ಲಿಯ ಫ್ಲಾಟ್‌ಗಳ ಮೇಲೆ ದಾಳಿ ಮಾಡಿ 8,59,69,100 ಮೊತ್ತವನ್ನು ಜಪ್ತಿ ಮಾಡಿದ್ದಾರೆ.

ಡಿಕೆಶಿ, ಸಚಿನ್ ನಾರಾಯಣ, ಸುನೀಲ್‌ಕುಮಾರ್ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯ್ದೆ-196ರ ಕಲಂ 277 ಮತ್ತು 278 ಹಾಗೂ ಐಪಿಸಿ ಕಲಂ 120 ಬಿ, 193 ಹಾಗೂ 199ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News