ವಿಶ್ವಕಪ್: ಭಾರತದ ಗೆಲುವಿಗೆ 228 ರನ್ ಗುರಿ

Update: 2019-06-05 13:27 GMT

 ಸೌಥಾಂಪ್ಟನ್, ಜೂ.5: ಸ್ಪಿನ್ನರ್ ಯಜುವೇಂದ್ರ ಚಹಾಲ್ ನೇತೃತ್ವದ ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕ ತಂಡ ಬುಧವಾರ ಇಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 8ನೇ ಪಂದ್ಯದಲ್ಲಿ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 227 ರನ್ ಗಳಿಸಿದೆ.

ಟಾಸ್ ಜಯಿಸಿದ ದಕ್ಷಿಣ ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ದೊಡ್ಡ ಮೊತ್ತ ಗಳಿಸುವ ಯೋಜನೆ ಹಾಕಿಕೊಂಡಿದ್ದ ದಕ್ಷಿಣ ಆಫ್ರಿಕ 23ನೇ ಓವರ್ ಅಂತ್ಯಕ್ಕೆ 89 ರನ್‌ಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು.

ಆಲ್‌ರೌಂಡ್ ಕ್ರಿಸ್ ಮೊರಿಸ್(42, 34 ಎಸೆತ, 1 ಬೌಂಡರಿ, 2 ಸಿಕ್ಸರ್)ಹಾಗೂ ರಬಾಡ(ಔಟಾಗದೆ 31, 35 ಎಸೆತ, 2 ಬೌಂಡರಿ)ಕೆಳ ಕ್ರಮಾಂಕದಲ್ಲಿ ಒಂದಷ್ಟು ಹೋರಾಟ ನೀಡಿ ತಂಡದ ಮೊತ್ತವನ್ನು 9 ವಿಕೆಟ್ ನಷ್ಟಕ್ಕೆ 227 ರನ್‌ಗೆ ತಲುಪಿಸಿದರು.

ಅಗ್ರ ಕ್ರಮಾಂಕದಲ್ಲಿ ನಾಯಕ ಪ್ಲೆಸಿಸ್(38), ಡೇವಿಡ್ ಮಿಲ್ಲರ್(31, 40 ಎಸೆತ)ತಾಳ್ಮೆಯ ಇನಿಂಗ್ಸ್ ಆಡಿ ತಂಡಕ್ಕೆ ಆಸರೆಯಾದರು. ಫೆಹ್ಲುಕ್ವಾಯೊ(34, 61 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಪರ ಸ್ಪಿನ್ನರ್ ಚಹಾಲ್(4-51)ಯಶಸ್ವಿ ಬೌಲರ್ ಎನಿಸಿಕೊಂಡರು. ಆಫ್ರಿಕಕ್ಕೆ ಆರಂಭಿಕ ಆಘಾತ ನೀಡಿದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ(2-35) ಹಾಗೂ ಕೆಳ ಕ್ರಮಾಂಕದಲ್ಲಿ ಭುವನೇಶ್ವರ ಕುಮಾರ್(2-44) ತಲಾ ಎರಡು ವಿಕೆಟ್ ಪಡೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News