ಪರಿಸರದ ಕಾಳಜಿ ಬದುಕಿನ ಉಸಿರಾಗಲಿ: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2019-06-05 13:27 GMT

ಬೆಂಗಳೂರು, ಜೂ.5: ವಿಶ್ವ ಪರಿಸರ ದಿನಾಚರಣೆ ದಿನದಂದು ಮಾತ್ರ ಸಸಿ ನೆಡುವ ಕಾಳಜಿ ತೋರಿಸಿದರೆ ಸಾಲದು. ಪರಿಸರದ ಕುರಿತು ಕಾಳಜಿ ನಮ್ಮ ಬದುಕಿನ ಉಸಿರಾಗಬೇಕೆಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಿರು ಉದ್ಯಾನದಲ್ಲಿ ಸಸಿನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಈಗಾಗಲೇ ನಗರಾದ್ಯಂತ ಹಲವಾರು ಸಂಘ ಸಂಸ್ಥೆಗಳು, ಗುಂಪುಗಳು ಸಸಿ ನೆಡುತ್ತಿವೆ. ಸಸಿ ನೆಟ್ಟು ಸುಮ್ಮನಾದರೆ ಸಾಲದು. ಅದು ಒಂದು ಹಂತದ ವರೆಗೆ ಬೆಳೆಯುವವರೆಗೆ ಪೋಷಣೆ ಮಾಡಬೇಕು ಎಂದರು.

ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಟ ಏಳು ಸಸಿ ನೆಡಬೇಕು ಎಂಬ ನಿಯಮವಿದೆ. ಅದರಂತೆ ಎಲ್ಲೆಲ್ಲಿ ಸ್ಥಳಾವಕಾಶವಿದೆಯೋ ಅಲ್ಲಿ ಸಸಿ ನೆಟ್ಟು ಪರಿಸರ ಉಳಿಸಬೇಕು. ಬಿಬಿಎಂಪಿ ವತಿಯಿಂದ ಮಳೆಗಾಲದಲ್ಲಿ 1,7500 ಸಸಿ ನೆಡುವ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಬಿಬಿಎಂಪಿ ನರ್ಸರಿಗಳಲ್ಲಿ 2.50 ಲಕ್ಷ ಸಸಿಗಳಿದ್ದು, ಈ ಬಾರಿಯ ಮಳೆಗಾಲದಲ್ಲಿ 1.75 ಲಕ್ಷ ಸಸಿ ನೆಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಗರಾದ್ಯಂತ ಸಸಿ ನೆಡುವ ಉದ್ದೇಶದಿಂದ ಬಿಬಿಎಂಪಿ ಗ್ರೀನ್ ಆ್ಯಪ್ ಮೂಲಕ ಸಸಿ ನೆಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಬಿಬಿಎಂಪಿ ವತಿಯಿಂದ ನೆಟ್ಟಿರುವ ಹಾಗೂ ಸಾರ್ವಜನಿಕರಿಗೆ ಸಸಿ ಉಚಿತವಾಗಿ ವಿತರಣೆ ಮಾಡಿರುವ ಸಸಿಗಳು ಸೇರಿ ಇದುವರೆಗೆ 6.50 ಲಕ್ಷ ಸಸಿ ವಿತರಿಸಲಾಗಿದೆ ಎಂದು ತಿಳಿಸಿದರು.

ನಗರದ 198 ವಾರ್ಡ್‌ಗಳಲ್ಲಿ ಮರ ಗಣತಿ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಅರಣ್ಯ ವಿಭಾಗದ ಅಧಿಕಾರಿಗಳಿಗೆ ತ್ವರಿತವಾಗಿ ಮರಗಣತಿ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಈ ವೇಳೆ ಉಪಮೇಯರ್ ಭದ್ರೇಗೌಡ, ತೋಟಗಾರಿಕಾ ಸ್ಥಾಯಿಸಮಿತಿ ಅಧ್ಯಕ್ಷೆ ಐಶ್ವರ್ಯ, ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News