ಮೈಕ್ರೋ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಅಗತ್ಯ: ತೇಜಸ್ವಿನಿ ಅನಂತಕುಮಾರ್

Update: 2019-06-05 14:31 GMT

ಬೆಂಗಳೂರು, ಜೂ.5: ಕಣ್ಣಿಗೆ ಕಾಣದ ಹಾನಿಕಾರಕ ಮೈಕ್ರೋ ಪ್ಲಾಸ್ಟಿಕ್ ನಿಂದ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ತುರ್ತು ಅಗತ್ಯದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಹೇಳಿದರು.  

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅದಮ್ಯ ಚೇತನ ಸಂಸ್ಥೆಯ ವತಿಯಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಐಐಟಿ ಬಾಂಬೆ ನಡೆಸಿರುವ ಸಂಶೋಧನೆಯ ಪ್ರಕಾರ ದೇಶದ ಬಹುತೇಕ ಬ್ರಾಂಡಿನ ಉಪ್ಪಿನಲ್ಲಿ ಮೈಕ್ರೋ ಪ್ಲಾಸ್ಟಿಕನ್ನು ನಾವು ಕಾಣಬಹುದಾಗಿದೆ ಎಂದರು.

ನಮ್ಮ ದಿನ ನಿತ್ಯದ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಆಹಾರಕ್ಕೆ, ನೀರು ಹಾಗೂ ಪರಿಸರಕ್ಕೆ ಸೇರ್ಪಡೆಯಾಗುತ್ತಿರುವ ಮೈಕ್ರೋ ಕಣಗಳು ಇದಕ್ಕೆ ಕಾರಣ. ನಮಗೆ ಗೊತ್ತಿಲ್ಲದಂತೆಯೇ ನಾವು ಹಾನಿಕಾರಕ ಪ್ಲಾಸ್ಟಿಕನ್ನ ಸೇವಿಸುತ್ತಿದ್ದೇವೆ. ಹಾಗೂ ಇತರರಿಗೂ ನೀಡುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆ ಇಲ್ಲದೆ ಜೀವನವೇ ಇಲ್ಲ ಎನ್ನುವ ಹಂತಕ್ಕೆ ತಲುಪಿರುವ ನಾವುಗಳು ಇದರ ಬಗ್ಗೆ ಹಾಗೂ ಇದರ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ತುರ್ತು ಅಗತ್ಯವಿದೆ ಎಂದು ಅವರು ಹೇಳಿದರು.

ವಿಶ್ವಸಂಸ್ಥೆ ನಡೆಸಿರುವ ಒಂದು ಸಂಶೋಧನೆಯಲ್ಲಿ ನಾವು ಸುರಕ್ಷಿತ ಎಂದು ಕುಡಿಯುವ ಬಾಟಲ್ ನೀರಿನಲ್ಲೂ 40 ರಿಂದ 900 ರಷ್ಟು ಮೈಕ್ರೋ ಕಣಗಳನ್ನು ಪತ್ತೆಹಚ್ಚಿರುವ ಆಘಾತಕಾರಿ ಅಂಶ ಬಯಲಾಗಿದೆ. ಇಂತಹ ಅಂಶಗಳನ್ನು ಜನರಿಗೆ ತಿಳಿಸಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಟಿ ತಾರಾ ಅನುರಾಧಾ, ಮೇದಿನಿ ಗರುಢಾಚಾರ್, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿ ಪ್ರಸಾದ್, ಮಾಜಿ ಮೇಯರ್ ಎಸ್ ,ಕೆ ನಟರಾಜ್, ಮಾಜಿ ಕಾರ್ಪೋರೇಟರ್ ಚಿನ್ನಗಿರಿ, ವೇದವ್ಯಾಸ ಭಟ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News