ಗ್ರಾಮ ವಾಸ್ತವ್ಯ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ: ಸಿಎಂ ಕುಮಾರಸ್ವಾಮಿ

Update: 2019-06-05 15:25 GMT

ಬೆಂಗಳೂರು, ಜೂ.5: ಗ್ರಾಮ ವಾಸ್ತವ್ಯ ಎನ್ನುವುದು ಯಾವುದೇ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ. ಈ ಪರಿಕಲ್ಪನೆಯ ಮೂಲ ಪುರುಷನೂ ನಾನಲ್ಲ. ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದ್ದು ಆಕಸ್ಮಿಕವಾಗಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ಗ್ರಾಮ ವಾಸ್ತವ್ಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ನಾನು ಗ್ರಾಮ ವಾಸ್ತವ್ಯವನ್ನು ಪ್ರಾರಂಭಿಸಿದಾಗ ಜನರು ತೋರಿದ ಪ್ರೀತಿ, ವಿಶ್ವಾಸ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಜನರ ಸಮಸ್ಯೆಗಳು, ಬದುಕಿನ ಕಟು ವಾಸ್ತವಗಳನ್ನು ಅರಿಯಲು ನೆರವಾಗಿದೆ. ಸರಕಾರದಿಂದ ಆಗಬೇಕಾದ್ದು ಏನು ಎಂಬ ಬಗ್ಗೆ ನೇರ, ಸರಳವಾದ ಅತ್ಯುತ್ತಮ ಸಲಹೆಗಳೂ ಬಂದಿವೆ ಎಂದು ಅವರು ಹೇಳಿದ್ದಾರೆ.

ಗ್ರಾಮ ವಾಸ್ತವ್ಯದ ಮುಖ್ಯ ಗುರಿ, ಆಡಳಿತ ಯಂತ್ರದ ಕಾರ್ಯವೈಖರಿ ಅರಿಯುವುದು. ಸರಕಾರ ರೂಪಿಸಿದ ಯೋಜನೆ ಫಲಕಾರಿಯೇ, ಜನರ ಅಭಿಪ್ರಾಯವೇನು ಎಂಬುದನ್ನು ಅರಿಯುವುದು, ಸುತ್ತಲಿನ ಗ್ರಾಮಗಳ ಜನರೂ ಸೇರುತ್ತಾರೆ. ಅವರಿಂದ ಅಹವಾಲು ಸ್ವೀಕರಿಸಿ ಪರಿಹರಿಸುವುದು. ಕಾನೂನು ವ್ಯಾಪ್ತಿಯಲ್ಲಿ ಇವುಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಅವರು ಹೇಳಿದರು.

ಎಚ್ಐವಿ ಪೀಡಿತ ಕುಟುಂಬವೊಂದರ ಮನೆಯಲ್ಲಿ ನಾನು ವಾಸ್ತವ್ಯ ಹೂಡಿದ್ದರಿಂದ ಆ ಕುಟುಂಬ ಊರನ್ನೇ ತೊರೆದಿದೆ ಎಂದು ವರದಿಯಾಗಿದೆ. ಇದು ನಿಜಕ್ಕೂ ದುರದೃಷ್ಣಕರ. ಎಚ್‌ಐವಿ ಬಗ್ಗೆ ಜನರಿಗಿರುವ ಅಂಧ ವಿಶ್ವಾಸವನ್ನು ದೂರ ಮಾಡುವ ಉದ್ದೇಶದಿಂದ ಏಯ್ಡ್ಸಾ ನಿಯಂತ್ರಣ ಮಂಡಳಿ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿ ವಾಸ್ತವ್ಯ ಮಾಡಿದ್ದೆ. ಆದರೆ ಸಮಾಜ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ವೈಯಕ್ತಿಕವಾಗಿಯೂ ನಾನು ಆ ಕುಟುಂಬಕ್ಕೆ ನೆರವಾಗಿದ್ದು, ಅದನ್ನು ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ಮತ್ತೊಮ್ಮೆ ಆ ಕುಟುಂಬ ವನ್ನು ಸಂಪರ್ಕಿಸಿ ಹೇಗೆ ನೆರವಾಗಬಹುದು ಎಂದು ಪರಿಶೀಲಿಸುವೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಸಾರಾಯಿ ನಿಷೇಧ, ಲಾಟರಿ ನಿಷೇಧ, ಸಾಲ ಮನ್ನಾ, ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳು, ಐದುನೂರಕ್ಕೂ ಹೆಚ್ಚು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆ, ಗ್ರಾಮಗಳ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಸುವರ್ಣ ಗ್ರಾಮ ಯೋಜನೆ - ಇವೆಲ್ಲಾ ಗ್ರಾಮವಾಸ್ತವ್ಯದ ಫಲಶ್ರುತಿಗಳು. ನನ್ನ ಅಧಿಕಾರಾವಧಿಯ ನಂತರ ಸುವರ್ಣ ಗ್ರಾಮ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಾರದೆ ಇರುವುದು ವಿಷಾದನೀಯ.
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News