ಇಂದು ಪಾಕಿಸ್ತಾನಕ್ಕೆ ಶ್ರೀಲಂಕಾ ಎದುರಾಳಿ

Update: 2019-06-06 18:35 GMT

ಬ್ರಿಸ್ಟಾಲ್, ಜೂ.6: ವಿಶ್ವಕಪ್‌ನಲ್ಲಿ ಆಡಿದ್ದ ಮೊದಲ ಪಂದ್ಯಗಳ ಸೋಲಿನಿಂದ ಚೇತರಿಸಿಕೊಂಡು ತಲಾ ಒಂದು ಪಂದ್ಯಗಳಲ್ಲಿ ಜಯ ಸಾಧಿಸಿರುವ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಶುಕ್ರವಾರ ಇಲ್ಲಿ ನಡೆಯಲಿರುವ ಟೂರ್ನಿಯ 11ನೇ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿವೆ.

 ಅಫ್ಘಾನಿಸ್ತಾನ ವಿರುದ್ಧ ಮಳೆಬಾಧಿತ ಪಂದ್ಯದಲ್ಲಿ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 92 ರನ್ ಗಳಿಸಿದ್ದ ಶ್ರೀಲಂಕಾ 201 ರನ್‌ಗೆ ಆಲೌಟಾಗಿ ಬ್ಯಾಟಿಂಗ್ ಕುಸಿತ ಕಂಡಿತ್ತು. ಆದಾಗ್ಯೂ ಅಫ್ಘಾನ್ ವಿರುದ್ಧ 34 ರನ್‌ಗಳಿಂದ ಜಯ ಸಾಧಿಸಿರುವ ಲಂಕಾ ತಂಡ ಮೊದಲ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಎದುರು ಅನುಭವಿಸಿದ್ದ 10 ವಿಕೆಟ್‌ಗಳ ಹೀನಾಯ ಸೋಲಿನಿಂದ ಹೊರ ಬಂದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಡಿ.ಕರುಣರತ್ನೆ ನೇತೃತ್ವದ ಲಂಕಾ ತಂಡ ಅಫ್ಘಾನ್ ವಿರುದ್ಧ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿತ್ತು. ಕೇವಲ 5 ರನ್ ಸೇರಿಸುವಷ್ಟರಲ್ಲಿ ಮಧ್ಯಮ ಕ್ರಮಾಂಕದಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದೀಗ ಲಂಕಾ ತಂಡ ಪಾಕ್ ವಿರುದ್ಧ ಕಠಿಣ ಸವಾಲು ಎದುರಿಸಲಿದೆ. ಪಾಕ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ 14 ರನ್‌ಗಳ ರೋಚಕ ಜಯ ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಸಂಘಟಿತ ಪ್ರಯತ್ನದಿಂದ ಇಂಗ್ಲೆಂಡನ್ನು ಅದರದೇ ನೆಲದಲ್ಲಿ ಬಗ್ಗುಬಡಿದಿರುವ ಪಾಕ್ ಪರ ಮುಹಮ್ಮದ್ ಹಫೀಝ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಟೂರ್ನಿಯಲ್ಲಿ ವಿಂಡೀಸ್ ವಿರುದ್ಧ ಆಡಿದ್ದ ತನ್ನ ಮೊದಲ ಪಂದ್ಯದಲ್ಲಿ ಕೇವಲ 105 ರನ್‌ಗೆ ಆಲೌಟಾಗಿದ್ದ ಪಾಕ್ ತಂಡ ಇಂಗ್ಲೆಂಡ್ ವಿರುದ್ಧ ಪುಟಿದೆದ್ದು, 348 ರನ್ ಗಳಿಸಿತ್ತು. ವಹಾಬ್ ರಿಯಾಝ್ ನೇತೃತ್ವದ ಬೌಲರ್‌ಗಳು ಒಗ್ಗಟ್ಟಿನ ಪ್ರದರ್ಶನ ನೀಡಿ ಪಾಕ್ ತಂಡ ಸತತ 11 ಸೋಲಿನ ಸರಮಾಲೆ ಕಳಚಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News