ರಾಜಧಾನಿಗೆ ಸ್ವಚ್ಛ ನಗರಿ ಪಟ್ಟ ದೊರಕಿಸಲು ಕ್ರಮ: ಮೇಯರ್ ಗಂಗಾಂಬಿಕೆ

Update: 2019-06-07 14:21 GMT

ಬೆಂಗಳೂರು, ಜೂ.7: ರಾಜಧಾನಿಯಲ್ಲಿ ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮಗಳನ್ನು ರೂಪಿಸಿ 2020ರ ವೇಳೆಗೆ 20ನೇ ರ‍್ಯಾಂಕ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ತಿಳಿಸಿದರು.

ಶುಕ್ರವಾರ ಮಲ್ಲೇಶ್ವರಂನ ಐಪಿಪಿ ತರಬೇತಿ ಕೇಂದ್ರದಲ್ಲಿ ಸ್ವಚ್ಛ ಸರ್ವೇಕ್ಷಣಾ ಕಾರ್ಯ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಪ್ರಗತಿಯ ಬಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ದೇಶದಲ್ಲೇ 194ನೇ ರ‍್ಯಾಂಕ್ನಲ್ಲಿದ್ದು, ಅದನ್ನು 2020ರ ವೇಳೆಗೆ 20ನೇ ರ‍್ಯಾಂಕ್ ಪಡೆಯಲು ಸಮರೋಪಾದಿಯಲ್ಲಿ ಸ್ವಚ್ಛ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು ಎಂದು ಹೇಳಿದರು.

ನಗರದಲ್ಲಿ ಬಿಬಿಎಂಪಿ ಸದಸ್ಯರು, ಶಾಲಾ ಮಕ್ಕಳು ಹಾಗೂ ಎನ್‌ಜಿಒಗಳನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗುವುದು. ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮಗಳನ್ನು ರೂಪಿಸಿ ಏಕೆ ಸ್ವಚ್ಛತಾ ಕಾರ್ಯಕ್ರಮಗಳು ಫಲಪ್ರದವಾಗುತ್ತಿಲ್ಲ ಎಂಬ ಬಗ್ಗೆ ಅವಲೋಕನ ಮಾಡಲಾಗುವುದು. ಅಲ್ಲದೆ ಸಂಸ್ಕರಣಾ ಘಟಕಗಳು, ಶೌಚಾಲಯ ನಿರ್ಮಾಣ ಸೇರಿದಂತೆ, ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ರ‍್ಯಾಂಕ್ ಕೊಡಲು ಕೆಲವು ಮಾನದಂಡಗಳು ಇರುತ್ತವೆ. ನಗರ ಪ್ರದೇಶದಲ್ಲಿ 10 ಸಾವಿರ ಶೌಚಾಲಯ ನಿರ್ಮಾಣ ಮಾಡಬೇಕೆಂಬುದು ಇದರಲ್ಲಿ ಒಂದಾಗಿದೆ. ಆದರೆ, ನಮಗೆ ಇದರಲ್ಲಿ ಶೇ.25 ರಷ್ಟನ್ನು ಮಾತ್ರ ನೆರವೇರಿಸಲು ಸಾಧ್ಯವಾಗಿದೆ. ಹಾಗಾಗಿ ರ‍್ಯಾಂಕ್ ನಲ್ಲಿ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ಲಾಸ್ಟಿಕ್ ಉತ್ಪನ್ನ ಬಳಕೆ ಕಡಿಮೆ ಮಾಡುವುದು, ಕಸ ವಿಂಗಡಣೆ, ಕಸ ಸಂಸ್ಕರಣಾ ಘಟಕ ಮಾಡುವುದು ಕೂಡ ಮಾನದಂಡಗಳಲ್ಲಿ ಮುಖ್ಯವಾಗಿದೆ. ಅಲ್ಲದೆ, ನಗರದ ನಾಗರಿಕರು ನಗರ ಅಭಿವೃದ್ಧಿಯಾಗಿರುವ ಬಗ್ಗೆ ಆನ್‌ಲೈನ್‌ನಲ್ಲಿ ರ‍್ಯಾಂಕಿಂಗ್ ಕೊಡಬೇಕಿದೆ. ನಾಗರಿಕರು ರ‍್ಯಾಂಕಿಂಗ್ ಕೊಡುತ್ತ ಹೋದರೆ ನಗರ ಉತ್ತಮ ಸ್ಥಾನಕ್ಕೆ ಏರಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಂಘ-ಸಂಸ್ಥೆಗಳ ಸಹಕಾರದಲ್ಲಿ ಇನ್ನು ಮುಂದೆ ಪ್ರತಿ ವಾರ್ಡ್‌ನಲ್ಲಿ ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆಯಾ ವಾರ್ಡ್‌ನ ಕಾರ್ಪೊರೇಟರ್‌ಗಳೇ ಇದಕ್ಕೆ ಮುಖ್ಯಸ್ಥರಾಗಿರುತ್ತಾರೆ. ಈಗಿನಿಂದಲೇ ಕಾರ್ಯಕ್ರಮಗಳನ್ನು ಹಾಕಿಕೊಂಡು ನಗರದ ಸಂಪೂರ್ಣ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತೇವೆ. ಶಾಲಾ- ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ 2020ರ ವೇಳೆಗೆ ಬೆಂಗಳೂರನ್ನು 20ನೇ ರ‍್ಯಾಂಕ್ಗೆ ತರುತ್ತೇವೆ ಎಂದು ಮೇಯರ್ ಗಂಗಾಂಬಿಕೆ ವಿಶ್ವಾಸ ವ್ಯಕ್ತಪಡಿಸಿದರು.

ಪುರಭವನದ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಬಳಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಶೌಚಾಲಯಕ್ಕೆ ಸಾರ್ವಜನಿಕರ ವಿರೋಧ ಎದುರಾಗಿದ್ದು, ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

-ಗಂಗಾಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News