ಮನೆ, ಬಡಾವಣೆ ನಿರ್ಮಾಣಕ್ಕೆ ಆನ್‌ಲೈನ್ ಪರವಾನಿಗೆ: ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್

Update: 2019-06-07 14:24 GMT

ಬೆಂಗಳೂರು, ಜೂ. 7: ಮನೆ, ಕಟ್ಟಡ, ಬಡಾವಣೆ, ವಸತಿ ಸಮುಚ್ಛಯಗಳ ನಿರ್ಮಾಣಕ್ಕೆ ಪರವಾನಿಗೆ (ಲೈನಸ್ಸ್) ಪಡೆಯಲು ಆಗುತ್ತಿದ್ದ ವಿಳಂಬ ತಪ್ಪಿಸಲು ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ, ನಕ್ಷೆಗೆ ಅನುಮತಿ ಪಡೆಯುವ ಯೋಜನೆ ಜೂ.11ಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

30x40 ಶುಕ್ರವಾರ ವಿಕಾಸಸೌಧದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳತೆಯ ವಿಸ್ತೀರ್ಣದಲ್ಲಿ ಮನೆ ನಿರ್ಮಾಣಕ್ಕೆ ಎನ್‌ಓಸಿ ಅಗತ್ಯವಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಒದಗಿಸಿದರೆ ಸ್ಥಳದಲ್ಲೆ ಸಿಗುವ ಪರವಾನಿಗೆ ಪತ್ರವನ್ನು ನಿರ್ಮಾಣ ಹಂತದ ಕಟ್ಟಡದಲ್ಲಿ ಪ್ರದರ್ಶಿಸಿದರೆ ಸಾಕು ಎಂದು ತಿಳಿಸಿದರು.

ಮನೆ, ಕಟ್ಟಡ ಮತ್ತು ಬಡಾವಣೆ ನಿರ್ಮಾಣಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಒಂದು ತಿಂಗಳು ಅಥವಾ 40 ದಿನಗಳ ಒಳಗಾಗಿ ಅನುಮತಿ ದೊರೆಯಲಿದೆ. ದಾಖಲೆಗಳು ಸರಿಯಾಗಿದ್ದರೆ ಮಾತ್ರ ಅರ್ಜಿ ಸ್ವೀಕೃತವಾಗುತ್ತದೆ. ಈ ನೂತನ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಗಿದೆ ಎಂದರು.

‘ಸ್ಮಾರ್ಟ್‌ಸಿಟಿ’ ರಾಜ್ಯಕ್ಕೆ ಆರನೆ ಸ್ಥಾನ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದ ‘ಸ್ಮಾರ್ಟ್‌ಸಿಟಿ’ ಯೋಜನೆಯಲ್ಲಿ ದೇಶದಲ್ಲೆ ಕರ್ನಾಟಕ ಆರನೆ ಸ್ಥಾನದಲ್ಲಿದೆ. ಉದ್ದೇಶಿತ ಯೋಜನೆಯಡಿ ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ, ತುಮಕೂರು, ಶಿವಮೊಗ್ಗ ನಗರಗಳು ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿದ್ದು, ಒಟ್ಟು 6448 ಕೋಟಿ ರೂ. ಮಂಜೂರಾಗಿದೆ ಎಂದರು.

ಕೇಂದ್ರ 970 ಕೋಟಿ ರೂ., ರಾಜ್ಯ ಸರಕಾರ 978 ಕೋಟಿ ರೂ. ಬಿಡುಗಡೆ ಮಾಡಿದ್ದು, 211ಕೋಟಿ ರೂ.ವೆಚ್ಚ ಮಾಡಲಾಗಿದೆ. ಅಲ್ಲದೆ, 2.5 ಸಾವಿರ ಕೋಟಿ ರೂ.ಗಳಷ್ಟು ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ 2 ಸಾವಿರ ಕೋಟಿ ರೂ.ಗಳಷ್ಟು ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದ್ದು, 1ಸಾವಿರ ಕೋಟಿ ರೂ.ಗಳಷ್ಟು ಯೋಜನೆ ಸಿದ್ದಪಡಿಸುವ ಹಂತದಲ್ಲಿವೆ ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಕೇಂದ್ರ ಸರಕಾರದ ನಿಯಮ-ಷರತ್ತುಗಳ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಇನ್ನು ಮುಂದೆ ಈ ಯೋಜನೆ ಪ್ರಗತಿಗೆ ಆಸ್ಥೆ ವಹಿಸಲಾಗುವುದು ಎಂದ ಅವರು, ಸ್ಮಾರ್ಟ್‌ಸಿಟಿ ಯೋಜನೆ ತ್ವರಿತ ಅನುಷ್ಠಾನಗೊಳಿಸಲಾಗುವುದು ಎಂದರು.

‘ಸ್ಮಾರ್ಟ್‌ಸಿಟಿ ಯೋಜನೆ ಪ್ರಗತಿ ಪರಿಶೀಲನೆಗೆ ಶೀಘ್ರದಲ್ಲೆ ಏಳು ನಗರಗಳಿಗೆ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಲಾಗುವುದು. ಅಲ್ಲದೆ, ಪ್ರತಿ ತಿಂಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಈ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ’

-ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News