4 ವರ್ಷದಲ್ಲಿ 15 ಕೆರೆಗಳು ಮಾಯ: ಸಂಪೂರ್ಣ ಮಾಹಿತಿ ನೀಡಲು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

Update: 2019-06-07 14:50 GMT

ಬೆಂಗಳೂರು, ಜೂ.7: ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 186 ಕೆರೆಗಳ ಪೈಕಿ ನಾಲ್ಕು ವರ್ಷದಲ್ಲಿ 15 ಕೆರೆಗಳು ಎಲ್ಲಿ ಮಾಯವಾದವು ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಲು ಹಾಗೂ ಕೆರೆ ನಿರ್ವಹಣೆ ಬಗ್ಗೆ ತಜ್ಞರ ಸಮಿತಿ ರಚಿಸಿರುವ ಕುರಿತು ಜೂ.13ರಂದು ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಎಂದು ಕೋರಿ ಸಿಟಿಜನ್ಸ್ ಆ್ಯಕ್ಷನ್ ಗ್ರೂಪ್ ಕಾರ್ಯದರ್ಶಿ ನೊಮಿತಾ ಚಾಂಡಿ ಹಾಗೂ ಜೆ.ಪಿ.ನಗರ 4ನೆ ಹಂತದ ಡಾಲರ್ಸ್ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗುಂಡಾ ಭಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಶುಕ್ರವಾರ ವಿಚಾರಣೆ ನಡೆಯಿತು.

2014ರಲ್ಲಿ ಬಿಬಿಎಂಪಿಯೇ ಹೈಕೋರ್ಟ್‌ಗೆ ವರದಿ ಸಲ್ಲಿಸಿ, ನಗರದಲ್ಲಿ 183 ಕೆರೆಗಳಿವೆ ಎಂದು ವರದಿ ಸಲ್ಲಿಸಿದೆ. ಆದರೆ, ಈಗ 168 ಕೆರೆಗಳಿವೆ ಎಂದು ವರದಿ ಸಲ್ಲಿಸಲಾಗಿದೆ. ಹಾಗಾದರೆ ಉಳಿದ 15 ಕೆರೆಗಳು ಎಲ್ಲಿ ಮಾಯವಾದವು ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, ಕೆರೆಗಳ ಸರ್ವೇ ಬಗ್ಗೆ ಕೂಡ ವರದಿಯನ್ನು ಸಲ್ಲಿಸಿ ಎಂದು ಸೂಚಿಸಿತು. ಇದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲ ಶ್ರೀನಿಧಿ ಅವರು, ಒಂದು ಕಾಲದಲ್ಲಿ ಕೆಂಪೇಗೌಡ ಬಸ್ ನಿಲ್ದಾಣವೂ ಕೆರೆಯಾಗಿತ್ತು. ಆದರೆ, ಈಗ ಅದು ಬಸ್ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ. ಹಲವು ಕೆರೆಗಳಲ್ಲಿ ಸರಕಾರಿ ಲೇಔಟ್, ಖಾಸಗಿ ಲೇಔಟ್‌ಗಳು ತಲೆ ಎತ್ತಿ ನಿಂತಿವೆ ಎಂದು ಪೀಠಕ್ಕೆ ವಿವರಣೆ ನೀಡಿದರು. 168 ಕೆರೆಗಳ ಪೈಕಿ 75 ಕೆರೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. 99 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬಿಡಿಎ ಕೂಡ ನೀರಿಲ್ಲದ ಕೆರೆಗಳಲ್ಲಿ ಲೇಔಟ್‌ಗಳನ್ನು ನಿರ್ಮಾಣ ಮಾಡಿದೆ ಎಂದು ಪೀಠಕ್ಕೆ ವಿವರಣೆ ನೀಡಿದರು. ಇದಕ್ಕೆ ಉತ್ತರಿಸಿದ ನ್ಯಾಯಪೀಠವು ಹಾಗಾದರೆ ಇಲ್ಲಿಯವರೆಗೆ ಕೆರೆಗಳ ಕುರಿತು ವೈಜ್ಞಾನಿಕ ವರದಿವೊಂದನ್ನು ಯಾಕೆ ತಯಾರಿಸಿಲ್ಲ ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಹಲಸೂರು ಕೆರೆ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ಇನ್ನಿತರ ಕೆರೆಗಳಿಗೆ ಚರಂಡಿ ನೀರು ಸೇರಿಕೊಳ್ಳುತ್ತಿದ್ದು, ಇದರಿಂದ, ನೀರಿನಲ್ಲಿರುವ ಜಲಚರಗಳಿಗೆ ತೊಂದರೆಯಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News