ದಲಿತರಿಗೆ ರಾಜಕೀಯ ದ್ರೋಹವೆಸಗಿದ ಬಿಜೆಪಿ: ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ

Update: 2019-06-07 15:57 GMT

ಬೆಂಗಳೂರು, ಜೂ.7: ಕರ್ನಾಟಕದ ಮೀಸಲು ಏಳು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಗಳಿಸಿದ್ದರೂ, ದಲಿತ ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡದೆ, ಬಿಜೆಪಿ ದ್ರೋಹವೆಸಗಿದೆ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಅದರಲ್ಲಿ 5 ಎಸ್ಸಿ, 2 ಎಸ್ಟಿ ಪಂಗಡಕ್ಕೆ ಮೀಸಲಿಡಲಾಗಿದೆ. ಈ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಸಂಸದರು ಜಯ ಗಳಿಸಿದ್ದಾರೆ. ಆದರೆ, ಯಾರಿಗೂ ಸಹ ಕೇಂದ್ರದಲ್ಲಿ ಮಂತ್ರಿ ಹುದ್ದೆ ನೀಡಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಮಾತ್ರವಲ್ಲದೆ, ದೇಶದಲ್ಲಿ ಎಲ್ಲಿಯೂ ಸಹ ಎಸ್ಸಿ-ಎಸ್ಟಿ ವರ್ಗದ ಸಂಸದರಿಗೆ ಉತ್ತಮವಾದ ಖಾತೆ ನೀಡಿಲ್ಲ ಎಂದ ಅವರು, ಬಹು ಜನರಿಗೆ ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ. ಅಷ್ಟೇ ಅಲ್ಲ, ಸಂಖ್ಯೆಯಲ್ಲಿ ಕಡಿಮೆ ಇರುವ ಜಾತಿಯ ಜನಕ್ಕೆ ಉತ್ತಮ ಖಾತೆಗಳ ಜವಾಬ್ದಾರಿ ನೀಡಿರುವುದು ಸರಿಯಲ್ಲ ಎಂದರು.

ಕೈಬಿಡಿ: ರಾಜ್ಯ ಸರಕಾರ ಈ ಹಿಂದೆ ಜಿಂದಾಲ್ ಕಂಪೆನಿಗೆ 3666 ಎಕರೆ ಭೂಮಿಯನ್ನು ಗುತ್ತಿಗೆಗೆ ನೀಡಿತ್ತು. ಬಳಿಕ, ಈ ಕಂಪೆನಿ ಹತ್ತಾರು ಸಾವಿರ ಕೋಟಿ ಆದಾಯ ಗಳಿಸಿತ್ತು. ಇದೀಗ ಇದೇ ಕಂಪೆನಿಗೆ ಕಡಿಮೆ ಬೆಲೆಯಲ್ಲಿ ಈ ಭೂಮಿ ಶಾಶ್ವತವಾಗಿ ಶುದ್ಧ ಕ್ರಯಕ್ಕೆ ಕೊಡಲು ಸರಕಾರ ಮುಂದಾಗಿರುವುದು ಸರಿಯಲ್ಲ. ಈ ಸಂಬಂಧ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದು, ಬಿಎಸ್ಪಿಯೂ ಖಂಡಿಸುತ್ತದೆ ಎಂದು ಹೇಳಿದರು.

ಜಿಂದಾಲ್ ಕಂಪೆನಿ ಸ್ಥಳೀಯರಿಗೆ ಯಾವುದೇ ರೀತಿಯ ಉದ್ಯೋಗ ನೀಡದೆ, ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದು, ತುಂಗಾಭದ್ರ ನದಿಯಲ್ಲಿ ಟಿಎಂಸಿ ಲೆಕ್ಕದಲ್ಲಿ ನೀರು ಸಹ ಬಳಕೆ ಮಾಡುತ್ತಿದೆ. ಅಷ್ಟೇ ಅಲ್ಲದೆ, ಈ ಕಂಪೆನಿ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದ್ದು, ಇದಕ್ಕೆ ಶಾಶ್ವತವಾಗಿ ಭೂಮಿ ನೀಡುವುದು ಸರಿಯಾದ ಕ್ರಮವಲ್ಲ ಎಂದು ಮಾರಸಂದ್ರ ಮುನಿಯಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News