ಹೆಚ್ಚು ಭಾಷೆ ಕಲಿತರೆ ಬೆಳವಣಿಗೆಗೆ ಸುಲಭ: ಬೆಂಗಳೂರು ವಿವಿ ಕುಲಪತಿ ಪ್ರೊ.ವೇಣುಗೋಪಾಲ್

Update: 2019-06-07 16:02 GMT

ಬೆಂಗಳೂರು, ಜೂ 6: ಇಂದಿನ ವಿದ್ಯಾರ್ಥಿಗಳು ಹೆಚ್ಚು ಭಾಷೆ ಕಲಿತಷ್ಟು ಬೆಳವಣಿಗೆ ಸುಲಭವಾಗುತ್ತದೆ. ಆದರೆ, ಇಂತಹ ಭಾಷೆಯನ್ನೇ ಕಲಿಯಬೇಕು ಎಂದು ಒತ್ತಡ ಹೇರಬಾರದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದ್ದಾರೆ.

ಶುಕ್ರವಾರ ನಗರದ ಸೆಂಟ್ರಲ್ ಕಾಲೇಜಿನಲ್ಲಿರುವ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಿದ್ದ ‘ತೆಲುಗು, ಕನ್ನಡ ಪತ್ರಿಕೆಗಳು, ಸಾಹಿತ್ಯ ಚಿಂತನೆ’ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಸಂದರ್ಭದಲ್ಲಿ ಪದವೀಧರರಿಂದ ಹಿಡಿದು ಗುಮಾಸ್ತರ ತನಕವಿರುವ ಎಲ್ಲದಕ್ಕೂ ಭಾಷೆಯ ಅಗತ್ಯವಿದೆ. ತುಂಬಾ ಉತ್ತಮವಾಗಿ ಸಂವಹಿಸುವವರಿಗೆ ಹೆಚ್ಚು ಮನ್ನಣೆಯೂ ಸಿಗುತ್ತದೆ. ಹೀಗಾಗಿ, ಹೆಚ್ಚಿನ ಭಾಷೆಗಳನ್ನು ಕಲಿಯುವುದರಿಂದ ಏನೂ ತೊಂದರೆಯಾಗುವುದಿಲ್ಲ. ಅಂದ ಮಾತ್ರಕ್ಕೆ ಇದನ್ನೇ ಕಲಿಯಬೇಕು ಎನ್ನುವುದು ಸರಿಯಾದುದಲ್ಲ ಎಂದರು.

ನಾನಾ ರಾಜ್ಯ, ದೇಶಗಳ ಜನರೊಂದಿಗೆ ಸಂವಹನ ಮಾಡುವ ಅವಕಾಶವನ್ನು ನೀಡಿ, ಎಲ್ಲರನ್ನೂ ಒಂದುಗೂಡಿಸುವಂತೆ ಮಾಡುವುದು ಭಾಷೆಯಿಂದ ಸಾಧ್ಯ. ಭಾಷೆ ಹಾಗೂ ಸಾಹಿತ್ಯಕ್ಕೆ ಒಂದು ಮಾಡುವ ಶಕ್ತಿಯಿದ್ದು, ಬೇರೆ ಭಾಷೆಯನ್ನಾಡುವ ಜನರ ಜತೆ ಸಂಪರ್ಕ ಸಾಧಿಸುವಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿರುವ ಎಲ್ಲ ಭಾಷೆಗಳು ಒಂದೇ ಆಗಿದ್ದು, ಬೇರೆ ಬೇರೆ ರಾಜ್ಯಗಳಿಗೆ ವಿಸ್ತರಣೆಯಾಗಿವೆ. ಅದನ್ನು ಕಲಿಯುವುದರಲ್ಲಿ ತಪ್ಪಿಲ್ಲ ಎಂದು ನುಡಿದರು.

ಸಮಾಜದಲ್ಲಿ ಬದುಕುತ್ತಿರುವ ಎಲ್ಲರೂ ನಮ್ಮಲ್ಲಿ ಯಾವುದೇ ಜಾತಿ, ಧರ್ಮವಿಲ್ಲ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮಲ್ಲಿರುವುದು ಒಂದೇ ಜಾತಿ ಎಂಬ ಕಲ್ಪನೆ ಬಂದಾಗ ಏನು ಬೇಕಾದರೂ ಸಾಧನೆ ಮಾಡಬಹುದು. ಇಂದಿನ ಜಾತಿ, ಧರ್ಮದ ಜಂಜಾಟದಲ್ಲಿ ಏನೂ ಸಾಧನೆ ಮಾಡಲು ಆಗುವುದಿಲ್ಲ ಎಂದ ಅವರು, ವಿದೇಶಗಳಲ್ಲಿ ನಮ್ಮನ್ನು ಭಾರತೀಯರು ಎಂದೇ ಗುರುತಿಸುತ್ತಾರೆ ಹೊರತು, ಈ ಜಾತಿ, ಧರ್ಮಕ್ಕೆ ಸೇರಿದವರೆಂದು ಗುರುತಿಸುವುದಿಲ್ಲ ಎಂದು ಹೇಳಿದರು.

ತೆಲುಗು ಪತ್ರಕರ್ತ ಕೆ.ಶ್ರೀನಿವಾಸ್ ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ವೆುೀಲೆ ತೆಲುಗು ಸಾಹಿತಿಗಳಲ್ಲಿ ಅಪಾರವಾದ ಅಭಿಮಾನವಿದೆ. ಆದರೆ, ರಾಜ್ಯದ ರಾಜಧಾನಿಯಲ್ಲಿ ತೆಲುಗು ಭಾಷಾ ಅಭಿವೃದ್ಧಿ ಶಾಖೆಯಿದ್ದರೂ ಇಲ್ಲದಂತೆ ನಿಷ್ಕೃಿಯಗೊಂಡಿದೆ. ಈ ಮೂಲಕ ಎರಡು ಭಾಷೆಗಳ ನಡುವಿನ ಸಾಹಿತ್ಯ ಸಂಬಂಧ ದೂರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯ ವಿಚಾರದಲ್ಲಿ ಪತ್ರಿಕಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ತೆಲುಗು ಸಮುದಾಯದವರು ಕನ್ನಡ ಭಾಷೆ ಕಲಿಯುವುದು ಅವಶ್ಯಕವಾಗಿದೆ. ಸಾಹಿತ್ಯ ಸೇವೆ ನಮ್ಮ ಜವಾಬ್ದಾರಿ ಎನ್ನುವುದಕ್ಕಿಂತ ಸಾಹಿತ್ಯದ ಅವಶ್ಯಕತೆಯನ್ನು ನಾವು ಅರಿಯಬೇಕು. ಸಾಹಿತ್ಯದಲ್ಲಿ ಸೃಜನಾತ್ಮಕ ಹಾಗೂ ಸೃಜನಾತ್ಮಕವಲ್ಲದ ಸಾಹಿತ್ಯ ಎಂಬ 2 ಪ್ರಕಾರಗಳಿವೆ. ಅದರಲ್ಲಿ ಯಾವುದನ್ನು ಅಳವಡಿಸಿಕೊಳ್ಳಬೇಕು ಎಂಬುದು ಆಯಾ ಪತ್ರಿಕೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News